ಬಾಳೆಬಾರೆ ಘಾಟಿಯಲ್ಲಿ ಬಸ್ಸಿಗೆ ಬೆಂಕಿ: ಪ್ರಯಾಣಿಕರು ಪಾರು
Saturday, February 28, 2026
ಕುಂದಾಪುರ: ಕುಂದಾಪುರ ತಾಲೂಕು ಸಿದ್ದಾಪುರ ಸಮೀಪದ ಬಾಳೆಬರೆ ಘಾಟಿಯಲ್ಲಿ ಶನಿವಾರ ಮಧ್ಯಾಹ್ನ ಖಾಸಗಿ ಬಸ್ ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾದ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಕುಂದಾಪುರದಿಂದ ಸಾಗರದತ್ತ ಹೊರಟಿದ್ದ ಬಸ್ ಸಿದ್ದಾಪುರ ಮಾರ್ಗವಾಗಿ ಸಾಗುತ್ತಿದ್ದ ವೇಳೆ ಬಾಳೆಬರೆ ಘಾಟಿ ಪ್ರದೇಶದಲ್ಲಿ ಏಕಾಏಕಿ ಇಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಅಪಾಯದ ಮುನ್ಸೂಚನೆ ಗೃಹಿಸಿದ ಚಾಲಕ ಮತ್ತು ಸಿಬ್ಬಂದಿ ಬಸ್‌ನ್ನು ತಕ್ಷಣ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಳಿಸಿದರು. ಇಪ್ಪತ್ತಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು. ಬಸ್ಸನ್ನು ಪರಿಶೀಲನೆ ನಡೆಸುತ್ತಿರುವಾಗ ಹಠಾತ್ತನೆ ವಾಹನದ ಒಳಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಕವಾಗಿ ಹಬ್ಬಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ. ಘಟನೆಯಿಂದಾಗಿ ಕೆಲವು ಹೊತ್ತಿನ ಕಾಲ ಘಾಟಿ ಪ್ರದೇಶದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು.