ಮನೆಗೆ ಅಕ್ರಮ ಪ್ರವೇಶಿಸಿ ಜೀವ ಬೆದರಿಕೆ: ಪ್ರಕರಣ ದಾಖಲು
ಕುಂದಾಪುರ: ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದಲ್ಲಿ ಶನಿವಾರ ಸಂಜೆ ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿದ ಕೆಲವರು ಮನೆಯವರಿಗೆ ಜೀವ ಬೆದರಿಕೆ ಹಾಕಿದರು ಎಂಬ ಪ್ರಕರಣ ಪರಿಸರದಲ್ಲಿ ತಲ್ಲಣ ಉಂಟುಮಾಡಿದೆ.
ಘಟನೆಯ ವಿವರ:
ಅಜಿತ್ ಕುಮಾರ್ ಶೆಟ್ಟಿ (32) ಎಂಬವರ ಮನೆಗೆ ಮೂರ್ನಾಲ್ಕು ಮಂದಿ ಶಸ್ತ್ರಸಜ್ಜಿತರಾಗಿ ಅಕ್ರಮ ಪ್ರವೇಶ ಮಾಡಿ ಕುಟುಂಬದವರಿಗೆ ಬೆದರಿಕೆಯೊಡ್ಡಿದರು ಎನ್ನಲಾಗಿದೆ.
ದೂರಿನ ಪ್ರಕಾರ ಫೆ.07 ರ ಶನಿವಾರ ಸಂಜೆ ಕಟ್ಕೇರೆ ನಿವಾಸಿ ಮೇಘರಾಜ್ ಶೆಟ್ಟಿ, ಜೀವನ್ ಶೆಟ್ಟಿ, ವಂಡ್ಸೆ ನಿವಾಸಿ ಗೋಪಾಲ ಶೆಟ್ಟಿ ಹಾಗೂ ಕೊಯ್ಕೂರು ನಿವಾಸಿ ಸಂದೀಪ ಶೆಟ್ಟಿ ಎಂಬವರು ತಲವಾರು ಮತ್ತು ಚೂರಿ ಹಿಡಿದು ಅಜಿತ್ ರವರ ಮನೆಗೆ ನುಗ್ಗಿದ್ದಾರೆ.
ಆರೋಪಿತರು, ಎಲ್ಲಾ ಕೊಠಡಿಗಳೊಳಗೆ ಹೋಗಿ ಅಜಿತ್ ಕುಮಾರ್ ಶೆಟ್ಟಿ ಅವರನ್ನು ಹುಡುಕಾಡಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ಅಜಿತ್ ಕುಮಾರ್ ಶೆಟ್ಟಿ ಅವರ ಹೆಂಡತಿ ಮತ್ತು ಅತ್ತೆ ಅಕ್ರಮ ಪ್ರವೇಶಿಸಿದ ಬಗ್ಗೆ ಪ್ರಶ್ನಿಸಿದಾಗ, ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿನ್ನ ಗಂಡ ಅಜಿತ್ ಶೆಟ್ಟಿ ಎಲ್ಲಿ? ಅವನು ಹಾರಾಟ ಜಾಸ್ತಿ ಮಾಡ್ತಾ ಇದ್ದಾನೆ, ತಾಕತ್ ಇದ್ರೆ ಇಲ್ಲಿಗೆ ಬರಲು ಹೇಳು, ಇಲ್ಲಿಯೇ ಕಡಿದು ಹಾಕ್ತೇನೆ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಮತ್ತೊಂದೆಡೆ, ಆರೋಪಿತ ಗೋಪಾಲ ಶೆಟ್ಟಿ ಅಜಿತ್ ಕುಮಾರ್ ಶೆಟ್ಟಿಯ ಅಪ್ರಾಪ್ತ ಮಗಳ ಮೇಲೆ ತಲವಾರು ತೋರಿಸಿ, “ನಿನ್ನ ಪಪ್ಪಾ ಸುಮ್ಮನಿರದಿದ್ದರೆ ನಿನ್ನನ್ನೂ, ನಿನ್ನ ಪಪ್ಪನನ್ನೂ ಇದೇ ಮನೆಯಲ್ಲಿ ಕಡಿದು ಹಾಕ್ತೇನೆ” ಎಂದು ಬೆದರಿಸಿ, ತಲವಾರನ್ನು ಆಕೆಯ ಕುತ್ತಿಗೆಗೆ ಸವರಿದ ಎನ್ನಲಾಗಿದೆ. ಈ ಭಯಾನಕ ಘಟನೆಯಿಂದ ಅಜಿತ್ ಅವರ ಹೆಂಡತಿ ತೀವ್ರ ಭೀತಿಗೊಂಡು ಕುಸಿದು ಬಿದ್ದಿದ್ದಾರೆ.
ಆ ಬಳಿಕ ಆರೋಪಿತರು “ಇಂದು ರಾತ್ರಿ ನಿಮ್ಮ ಕೊನೆಯ ದಿನ” ಎಂದು ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಮನೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಶಾಂತಿ ಭಂಗ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.