ಎದೆಯೊಳಗೆ ಹೊಕ್ಕ ಕಬ್ಬಿಣದ ರಾಡ್: 11 ವರ್ಷದ ಬಾಲಕಿಯ ಪ್ರಾಣ ರಕ್ಷಿಸಿದ ಕೆಎಂಸಿ ಆಸ್ಪತ್ರೆಯ ವೈದ್ಯರು
ಜ.18 ರಂದು ಬಾಲಕಿ ಆಟವಾಡುವಾಗ ಕಬ್ಬಿಣದ ರಾಡ್ ಮೇಲೆ ಆಕಸ್ಮಿಕವಾಗಿ ಬಿದ್ದಿದ್ದು, ರಾಡ್ ಬಾಲಕಿಯ ಎದೆಯ ಬಲಭಾಗದಲ್ಲಿ ಮುಂದೆಯಿಂದ ಹೊಕ್ಕಿ ಹಿಂಬದಿಯಿಂದ ಹೊರಬಂದಿದ್ದು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಪೋಷಕರು ಬಾಲಕಿಯನ್ನು ಕರೆದೊಯ್ದಿದ್ದು, ವೈದ್ಯರು ಸೂಕ್ತವಾದ ಪ್ರಾಥಮಿಕ ಚಿಕಿತ್ಸೆ ನೀಡಿ ಸಕಾಲದಲ್ಲಿ ಹೆಚ್ಚಿನ ಚಿಕಿತ್ಸೆಗೆ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ತಜ್ಞೆ ಡಾ. ಅರ್ಪಿತಾ ಮತ್ತವರ ತಂಡ ತಕ್ಷಣ ಬಾಲಕಿಯ ಸ್ಥಿತಿಯನ್ನು ಅರಿತು ಶಸ್ತ್ರಚಿಕಿತ್ಸೆ ಕೊಠಡಿಗೆ ಕಳುಹಿಸಿಕೊಟ್ಟಿದ್ದಾರೆ.
ಚಿಕಿತ್ಸೆ ಕುರಿತು ಡಾ. ಸದಾಶಿವ್ ರಾವ್ ಮಾತನಾಡಿ, ಮಕ್ಕಳಲ್ಲಿ ಎದೆಯೊಳಗೆ ಇಂತಹ ವಸ್ತುಗಳು ಹೊಕ್ಕುವಂತಹ ಘಟನೆಗಳು ಅಪರೂಪ ಆದರೆ ಇವು ಜೀವಕ್ಕೆ ಅಪಾಯಕಾರಿ. ಚಾಕು, ರಾಡ್‌ನಂತಹ ವಸ್ತುಗಳು ಎದೆಯೊಳಗೆ ಹೊಕ್ಕಿದಂತಹ ಸಂದರ್ಭದಲ್ಲಿ ಒಳಹೊಕ್ಕಿದ ವಸ್ತುಗಳನ್ನು ತಜ್ಞರ ಮತ್ತು ಸಂಪೂರ್ಣ ಸೌಕರ್ಯ ಹೊಂದಿರುವ ಆರೋಗ್ಯ ಕೇಂದ್ರದಲ್ಲಿ ಮಾತ್ರ ಹೊರತೆಗೆಯಬೇಕು ಎಂಬುದು ತಿಳಿದುಕೊಳ್ಳುವುದು ಮುಖ್ಯ. ಈ ಪ್ರಕರಣ ಕೂಡ ಸಂಕೀರ್ಣವಾಗಿದ್ದು ರಾಡ್‌ನ್ನು ಎದೆಯೊಳಗಿಂದ ತೆಗೆಯುವ ಮುನ್ನ ಹೆಚ್ಚುವರಿ ರಾಡ್‌ನ್ನು ತುಂಡರಿಸುವುದು ಅಗತ್ಯವಾಗಿತ್ತು ಎಂದು ತಿಳಿಸಿದ್ದಾರೆ.
