ಭಾರತ ಸದೃಢವಾಗಿರಲು ಕೇಸರಿಯ ಪಾತ್ರ ಮಹತ್ವದ್ದಾಗಿದೆ : ಕರಿಂಜೆ ಶ್ರೀ

ಭಾರತ ಸದೃಢವಾಗಿರಲು ಕೇಸರಿಯ ಪಾತ್ರ ಮಹತ್ವದ್ದಾಗಿದೆ : ಕರಿಂಜೆ ಶ್ರೀ


ಮೂಡುಬಿದಿರೆ: ಹಿಂದೂ ಧರ್ಮವನ್ನು ಪ್ರತಿನಿಧಿಸುವ ಕೇಸರಿ ತ್ಯಾಗ ಹಾಗೂ ಶೌಯ೯ದ ಪ್ರತೀಕವಾಗಿದೆ ಎಂದು ಕರಿಂಜೆ ಕರಿಂಜೆ ಗುರು ರಾಘವೇಂದ್ರ ಮಠದ ಮುಕ್ತಾನಂದ ಸ್ವಾಮೀಜಿ ನುಡಿದರು.


ಅವರು ಹಿಂದೂ ಸಂಗಮ ಆಯೋಜನಾ ಸಮಿತಿ ಇದರ ಮೂಡುಬಿದಿರೆ ತಾಲೂಕಿನ  ಕಲ್ಲಮುಂಡ್ಕೂರು ಮಂಡಲದ ನಿಡ್ಡೋಡಿ, ಕಲ್ಲಮುಂಡ್ಕೂರು, ತೆಂಕಮಿಜಾರು ಮತ್ತು ಬಡಗಮಿಜಾರು ಗ್ರಾಮಗಳನ್ನೊಳಗೊಂಡ ಹಿಂದೂ ಸಂಗಮವನ್ನು ಭಾನುವಾರ ಕಲ್ಲಮುಂಡ್ಕೂರಿನಲ್ಲಿ ಉದ್ಘಾಟಿಸಿ ಆಶೀವ೯ಚನ ನೀಡಿದರು.


ಕೇಸರಿ ಯಾವುದೇ ಒಂದು ಪಕ್ಷದ ಸ್ವತ್ತಾಗಿಲ್ಲ. ಅದು ಧರ್ಮವನ್ನು ಪ್ರತಿನಿಧಿಸುವ ಗೌರವದ ಪ್ರತಿಷ್ಠೆಯ ಪ್ರತೀಕವಾಗಿದೆ. ಭಾರತ ಸದೃಢವಾಗಿರಲು ಕೇಸರಿ ಮಹತ್ವದ್ದಾಗಿದೆ. ಅದರ ಎದುರು ದೌರ್ಜನ್ಯ ಹಾಗೂ ದಬ್ಬಾಳಿಕೆಗಳು ಎಂದಿಗೂ ನಡೆಯುವುದಿಲ್ಲ ಎಂದು ಹೇಳಿದ ಅವರು ಇತಿಹಾಸದಲ್ಲಿ ಶಸ್ತ್ರಾಸ್ತ್ರಗಳನ್ನೂ, ಪುಸ್ತಕಗಳನ್ನೂ ಹಿಡಿದು ಮತಾಂತರಕ್ಕೆ ಬಂದವರು ಇದ್ದರೂ ಕೇಸರಿಯನ್ನು ಬದಲಾಯಿಸಲು ಯಾರಿಗೂ ಸಾಧ್ಯವಾಗಿಲ್ಲ ಎಂದು  ತಿಳಿಸಿದರು.


ರಾಷ್ಟ್ರೋತ್ಥಾನ ಕನ್ನಡ ವಿಭಾಗದ ಮುಖ್ಯಸ್ಥ ಅರುಣ್ ಉಳ್ಳಾಲ್ ಮಾತನಾಡಿ, ಸಾಮರಸ್ಯ ಹಾಗೂ ಸಹಬಾಳ್ವೆಯನ್ನು ಕಾಪಾಡುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉದ್ದೇಶವಾಗಿದೆ.


ಹಿಂದೂ ಜಾಗೃತಿ ನಮ್ಮೊಳಗೆ ಬೆಳೆದು ಸಾಮಾಜಿಕ ಸಾಮರಸ್ಯವನ್ನು ಜೀವಂತವಾಗಿಸಬೇಕು. ನಮ್ಮತನವನ್ನು ಮರೆಯದೆ ಸಂಪ್ರದಾಯಗಳ ಪರಿಗಣನೆ ಮಾಡುವುದು, ಪರಿಸರ ಪ್ರಜ್ಞೆ ಬೆಳೆಸುವುದು ಹಾಗೂ ಜಾತಿ ಭೇದಭಾವಗಳನ್ನು ತೊರೆದು ಬದುಕುವುದು ಅಗತ್ಯವೆಂದು ಹೇಳಿದರು.


ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಅಧ್ಯಕ್ಷ  ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೂ ಸಮಾಜ ಬಲವಾಗಬೇಕಾದರೆ ಹಳ್ಳಿ ಯುವಕರ ಒಗ್ಗಟ್ಟು ಅಗತ್ಯವಿದೆ. ಸಮಾಜದಲ್ಲಿ ದ್ವೇಷವನ್ನು ಬೆಳೆಸದೆ ಇತರ ಜಾತಿ-ಧರ್ಮಗಳನ್ನು ಗೌರವಿಸುವಂತೆ ಯುವಜನತೆಗೆ ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಜಾನು ಪೂಜಾರಿ, ಅಶ್ವತ್ಥಪುರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೆಸರ ರಘುನಾಥ ಎಲ್.ವಿ., ದೈಲಬೆಟ್ಟು ದೇವಸ್ಥಾನದ ಆಡಳಿತ ಮೊಕ್ತೆಸರ ಜಯಪ್ರಕಾಶ್ ಪಡಿವಾಳ್, ಕಾರ್ಯಕರ್ತರಾದ ಕೆ. ವನಿತಾ ಎಸ್. ಭಟ್, ಕಲ್ಲಮುಂಡ್ಕೂರು ವಿಠೋಬ ರುಕುಮಾಯಿ ಮಂದಿರದ ರವೀಂದ್ರ ಭಟ್, ಕೊರಗಜ್ಜ ದೈವರಾಧಕ ಸುರೇಶ್, ಮಹಮ್ಮಾಯಿ ಮರಾಠಿ ಸೇವಾ ಸಮಿತಿಯ ಗುರಿಕಾರ ಅಪ್ಪು ನಾಯ್ಕ್, ಕುಡುಬಿ ಸಮುದಾಯದ ನೀರ್ಕೆರೆಯ ಗುರಿಕಾರ  ಸಂಜೀವ ಗೌಡ, ರಥಶಿಲ್ಪಿ ಶಿವಪ್ರಸಾದ್ ಆಚಾರ್ಯ, ಮುಂಬೈ ಇಸ್ಕಾನ್ ಸಂಸ್ಥೆಯ ಸದಾನಂದ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.


ಹಿಂದೂ ಸಂಗಮದ ತಾಲೂಕು ಉಪಾಧ್ಯಕ್ಷ ಭಾಸ್ಕರ ದೇವಸ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಾವಿತ್ರಿ ಅವರು ವೈಯಕ್ತಿಕ ಗೀತೆ ಹಾಡಿದರು.


ಸೂಯ೯ಕಾಂತ್ ಭಟ್ ಕಲ್ಲಮುಂಡ್ಕೂರು ಮತ್ತು ಪ್ರಸಾದ್ ಅಶ್ವತ್ಥಪುರ ಕಾಯ೯ಕ್ರಮ ನಿರೂಪಿಸಿದರು.


ಇದಕ್ಕೂ ಮೊದಲು ಕಲ್ಲಮುಂಡ್ಕೂರು ಬಿಲ್ಲವ ಸಂಘದ ಆವರಣದಿಂದ ಕಾಯ೯ಕ್ರಮದ ಆವರಣದವರೆಗೆ ವಿವಿಧ ಕಲಾ ತಂಡಗಳು, ಕುಣಿತ ಭಜನಾ ತಂಡ ಹಾಗೂ ಆಂಜನೇಯನ ವೇಷಧಾರಿ, ಭಾರತಮಾತೆಯ ಭಾವಚಿತ್ರ ಮೆರವಣಿಗೆಯಲ್ಲಿ ಸಾಗಿ ಬಂದವು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article