ಫೆ.20-ಮಾ.1 ರಂದು ರಾಜ್ಯ ಮಟ್ಟದ ಆಹ್ವಾನಿತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಶಿಪ್
ಮಂಗಳೂರು: ಕೋಸ್ಮೋಪೊಲಿಟನ್ ಕ್ಲಬ್ ವತಿಯಿಂದ ಫೆ.20 ರಿಂದ ಮಾ.1ರವರೆಗೆ ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಕೋಸ್ಮೋಪೊಲಿಟನ್ ಕ್ಲಬ್ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಆಹ್ವಾನಿತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೂರ್ನಮೆಂಟ್ ಚೇರ್‌ಮೆನ್ ರಾಜಗೋಪಾಲ ರೈ ಅವರು ಮಾತನಾಡಿ, ಬೆಳಗ್ಗೆ 10.30ಕ್ಕೆ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಎ. ಸದಾನಂದ ಶೆಟ್ಟಿ ಅವರು ವಹಿಸಲಿದ್ದಾರೆ. ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಸ್ಪರ್ಧೆ ನಡೆಯುತ್ತಿದೆ ಎಂದರು.
ಈ ಸ್ಪರ್ಧೆಯಲ್ಲಿ ಪ್ರತಿಷ್ಠಿತ 14 ಮಂದಿ ರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಾರೆ. ವಿಜೇತರಿಗೆ ನಗದು ಹಾಗೂ ಆಕರ್ಷಕವಾದ ಬಹುಮಾನಗಳನ್ನು ನೀಡಲಾಗುತ್ತದೆ. ನಮ್ಮ ಕ್ಲಬ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹಳೇಯ ಕ್ಲಬ್ ಆಗಿದ್ದು, 1901 ರಲ್ಲಿ ಅಸ್ತಿತ್ವಗೊಂಡಿತು. ಈಗಾಗಲೇ ಅನೇಕ ಜನಪರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದರು.
ಸಮ್ಮಾನ ಸಮಾರಂಭ:
ಮಾ.1 ರಂದು ಸಂಜೆ 6 ಗಂಟೆಗೆ ನಮ್ಮ ಸಂಸ್ಥೆಯ 125ನೇ ವರ್ಷಾಚರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ, ಅದಾನಿ ಕಂಪೆನಿಯ ಕಿಶೋರ್ ಆಳ್ವ ಸಹಿತ ಗಣ್ಯರು ಭಾಗವಹಿಸುವರು. ಸಮಾರಂಭದಲ್ಲಿ ಸಂತೋಷ್ ಹೆಗ್ಡೆ, ಸದಾನಂದ ಶೆಟ್ಟಿ ಮತ್ತು ನಟ ನವೀನ್ ಡಿ ಪಡೀಲ್ ಅವರಿಗೆ ಸಮ್ಮಾನ ನಡೆಯಲಿದೆ ಎಂದರು.
ಕ್ಲಬ್ಬಿನ ಕಾರ್ಯದರ್ಶಿ ಎಂ.ಸಿ. ಶೆಟ್ಟಿ, ಕಾರ್ಯದರ್ಶಿಗಳಾದ ಯೋಗೀಶ್ ಕುಮಾರ್, ಕೋಶಾಧಿಕಾರಿಗಳಾದ ದೇವಿಚರಣ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಮನೋಜ್ ಕುಮಾರ್, ಪುಷ್ಪರಾಜ್ ಶೆಟ್ಟಿ, ಪ್ರಸಾದ್ ರೈ ಮುಂತಾದವರು ಉಪಸ್ಥಿತರಿದ್ದರು.