ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ
Monday, February 16, 2026
ಮಂಗಳೂರು: ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವ ಬೆನ್ನಲ್ಲೇ, ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೂ ಬೆದರಿಕೆ ಸಂದೇಶ ಬಂದಿದ್ದು, ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇ-ಮೇಲ್ ಗೆ ಬೆದರಿಕೆ ಸಂದೇಶ ಬಂದಿದ್ದು ಸುದ್ದಿ ತಿಳಿಯುತ್ತಿದ್ದಂತೆಯೇ ಕೂಡಲೇ ಕಾರ್ಯಪ್ರವೃತ್ತರಾದ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ಸಿಬ್ಬಂದಿ ನ್ಯಾಯಾಲಯದ ಆವರಣ, ಕೊಠಡಿಗಳು ಹಾಗೂ ವಾಹನ ನಿಲ್ದಾಣಗಳಲ್ಲಿ ತೀವ್ರ ಶೋಧ ನಡೆಸಿದರು.
ಗಂಟೆಗಳ ಕಾಲ ನಡೆದ ತಪಾಸಣೆಯ ನಂತರ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಬೆದರಿಕೆ ಎಂಬುದು ದೃಢಪಟ್ಟಿದೆ. ಮಂಗಳೂರು ನ್ಯಾಯಾಲಯಕ್ಕೆ ಈ ಹಿಂದೆಯೂ ಎರಡು ಬಾರಿ ಇಂತಹ ಬೆದರಿಕೆ ಇ-ಮೇಲ್‌ಗಳು ಬಂದಿದ್ದವು ಎಂಬುದು ಗಮನಾರ್ಹ. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.