‘ಜವಾಬ್ದಾರಿ ವಹಿಸಿಕೊಂಡ ಮಹಿಳೆಯರು ಎಲ್ಲೂ ಸೋತಿಲ್ಲ’: ಡಾ. ಎಂ. ವೀರಪ್ಪ ಮೊಲಿ
ಮಂಗಳೂರು ತಾಲ್ಲೂಕು ಮಹಿಳಾ ಮಂಡಲಗಳ ಒಕ್ಕೂಟ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ ‘ಮಹಿಳಾ ವೈಭವ’ವನ್ನು ಉದ್ಘಾಟಿಸಿದ ಅವರು, ‘ಮಹಾತ್ಮ ಗಾಂಧೀಜಿ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟಿದ್ದರು. ಮಹಿಳೆಯ ಶಕ್ತಿ ತಿಳಿದಿದ್ದ ಕಾರಣ ಅವರು ಅದಕ್ಕೆ ಮುಂದಾದರು. ಪ್ರತಿಭೆಯಲ್ಲಿ ಗಂಡಿಗಿಂತ ಹೆಣ್ಣು ಶ್ರೇಷ್ಠ ಎಂಬುದನ್ನು ಅನುಭವದಿಂದ ಕಂಡುಕೊಂಡಿದ್ದೇನೆ. ಆಕೆಯನ್ನು ಸರಕು ಎಂಬರ್ಥದಲ್ಲಿ ಕಾಣುವುದು ಸರಿಯಲ್ಲ’ ಎಂದ ಅವರು ‘ನನ್ನ ಹಿಂದೆ ತಾಯಿ, ನಿರಕ್ಷರಕುಕ್ಷಿ ಪೂವಮ್ಮ ಅವರ ಶಕ್ತಿ ಇದೆ’ ಎಂದರು.
ಅಥ್ಲೀಟ್ ಎಂ.ಆರ್.ಪೂವಮ್ಮ, ಸಮಾಜ ಸೇವಕಿ ಹಿಲ್ಡಾ ರಾಯಪ್ಪ, ಸರಳಾ ಕಾಂಚನ್, ಲಕ್ಷ್ಮಿರಾವ್ ಆರೂರು, ಚೌಡಕಿ ಪದ ಗಾಯಕಿ ವಿಜಯಪುರದ ಕಮಲವ್ವ ಮುಂತಾದವರನ್ನು ಗೌರವಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಮೆರವಣಿಗೆಗೆ ಚಾಲನೆ ನೀಡಿದರು.
ವಿಚಾರಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕಿ ಮೋಟಮ್ಮ ರಾಜಕೀಯದಲ್ಲಿ ಮಹಿಳೆ ಎಂಬ ವಿಷಯದ ಬಗ್ಗೆ, ಎಸ್‌ಡಿಎಂ ಕಾನೂನು ಕಾಲೇಜಿನ ಉಪ ಪ್ರಾಚಾರ್ಯೆ ಬಾಲಿಕಾ ಪ್ರಶಾಂತ್ ‘ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣ’ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ ರಾವ್, ಕಾಂಗ್ರೆಸ್ ಮುಖಂಡ ರಮಾನಾಥ ರೈ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಶಾಸಕ ವೇದವ್ಯಾಸ ಕಾಮತ್, ಮಹಿಳಾ ಒಕ್ಕೂಟಗಳ ಅಧ್ಯಕ್ಷೆ ಚಂಚಲಾ ತೇಜೋಮಯ, ಕಾಂಗ್ರೆಸ್ ಮುಖಂಡರಾದ ಭಾಸ್ಕರ ಮೊಯಿಲಿ, ಶಕುಂತಳಾ ಶೆಟ್ಟಿ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಮುಂತಾದವರು ಪಾಲ್ಗೊಂಡಿದ್ದರು.
‘ರಾಜಕೀಯ ಸ್ಥಾನಮಾನ ಮುಖ್ಯ’
‘ಪ್ರಜಾಪ್ರಭುತ್ವದ ದೇಶ ಭಾರತದಲ್ಲಿ ಹೆಣ್ಣಿಗೆ ಗೌರವ ಸಲ್ಲಿಸಬೇಕೆಂದರೆ ಆಕೆಗೆ ರಾಜಕೀಯ ಸ್ಥಾನಮಾನ ಕೊಡಬೇಕು. ಆಕೆ ದೇಶದ ರಾಜ್ಯದ ರಾಜಕಾರಣದಲ್ಲಿ ಸಕ್ರಿಯಳಾಗಿದ್ದರೆ ಸಮಾಜದ ಬದಲಾವಣೆ ಸಾಧ್ಯ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್ ಧರ್ಮ ಅಭಿಪ್ರಾಯಪಟ್ಟರು. ‘ಅಭಿವೃದ್ಧಿ ಸಾಧಿಸಲು ಮಹಿಳೆ ಸ್ವತಃ ಮನಸ್ಸು ಮಾಡಬೇಕು. ಆಕಾಶದೆತ್ತರಕ್ಕೆ ಹಾರಲು ಪ್ರಯತ್ನಿಸಬೇಕು. ಯಾರೋ ಅದನ್ನು ಮಾಡಿಸುತ್ತಾರೆ ಎಂದುಕೊಂಡು ಸುಮ್ಮನಿರಬಾರದು’ ಎಂದು ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್ ಹೇಳಿದರು.
ರಾಜ್ಯ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ ‘ನಮ್ಮ ಧರ್ಮವನ್ನು ಪ್ರೀತಿಸುತ್ತ ಪರಧರ್ಮವನ್ನು ಸಹಿಸಿಕೊಂಡು ಬಾಳಲು ತಾಯಂದಿರು ಪ್ರೇರಣೆಯಾಗಬೇಕು’ ಎಂದರು.