ಎಸ್‌ಐಆರ್: ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಹುನ್ನಾರ
ಮಂಗಳೂರು: ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಎಂಬುದು ದೇಶದ ಮತದಾರರನ್ನು ಅತ್ಯಂತ ವ್ಯವಸ್ಥಿತವಾಗಿ ಮತದಾರರ ಪಟ್ಟಿಯಿಂದ ಹೊರಗಿಡುವ ಹುನ್ನಾರವಾಗಿದೆ. ಇದರ ವಿರುದ್ಧ ಜನಾಂದೋಲನ ಮಾಡುವ ಅಗತ್ಯವಿದೆ ಎಂದು ಜಾಗೃತ ಕರ್ನಾಟಕದ ಸಂಚಾಲಕ ಡಾ.ವಾಸು ಎಚ್.ವಿ. ಹೇಳಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ವತಿಯಿಂದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ವಿಚಾರ ಸಂಕಿರಣದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆ ದೇಶಕ್ಕೆ ಹೊಸತೇನಲ್ಲ. ಅದು ಕಾಲಕಾಲಕ್ಕೆ ಆಗಲೇಬೇಕಿದೆ. ಆದರೆ ಹಾಲಿ ಕೇಂದ್ರ ಸರಕಾರವು ಚುನಾವಣಾ ಆಯೋಗದ ಮೂಲಕ ಮಾಡಿಸುವ ಎಸ್‌ಐಆರ್ ಹಿಂದೆ ದೊಡ್ಡ ಸಂಚು ಇದೆ. ದೇಶದಲ್ಲಿ ಬಡವರು, ಅನಕ್ಷರಸ್ಥರು, ಕಾರ್ಮಿಕರು, ರೈತರು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಾರೆ. ಅವರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಡುವ ಬಹುದೊಡ್ಡ ಷಡ್ಯಂತ್ರ್ಯ ಇದರ ಹಿಂದೆ ಅಡಗಿದೆ. ಅದಕ್ಕಾಗಿಯೇ ಸಾಫ್ಟ್‌ವೇರ್ ತಯಾರಿಸಲಾಗಿದೆ. ಆ ಮೂಲಕ ಕೋಟ್ಯಂತರ ಮತದಾರರನ್ನು ಪಟ್ಟಿಯಿಂದ ಹೊರಗೆ ಹಾಕುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಇದರ ವಿರುದ್ಧ ಹೋರಾಟ ಮಾಡಬೇಕಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೇ ಸುಪ್ರೀಂ ಕೋರ್ಟ್‌ನಲ್ಲಿ ಇದರ ವಿರುದ್ಧ ಹೋರಾಟ ಮಾಡಿದ್ದಾರೆಂದರೆ ಇದರ ದುಷ್ಪರಿಣಾಮ ಎಷ್ಟಿರಬಹುದು ಎಂದು ಅಂದಾಜಿಸಬಹುದು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವಿದೆ. ಇದರ ಬಗ್ಗೆ ಇಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಆಳುವ ಕಾಂಗ್ರೆಸ್ ಪಕ್ಷಕ್ಕೆ ಇದು ಮುಜುಗರದ ಸಂಗತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ದೇಶದ ಕಟ್ಟಕಡೆಯ ವ್ಯಕ್ತಿಯೂ ಮತದಾನದ ಪ್ರಕ್ರಿಯೆಯಿಂದ ಹೊರಗೆ ಉಳಿಯಬಾರದು ಎಂಬುದು ದೇಶದ ಚುನಾವಣಾ ಆಯುಕ್ತರಾಗಿದ್ದ ಸುಕುಮೇರ್ ಸೇನ್ ಅವರ ಕನಸಾಗಿತ್ತು. ಆದರೆ ಹಾಲಿ ಚುನಾವಣಾ ಆಯುಕ್ತರು ಕೇಂದ್ರ ಸರಕಾರದ ಪರವಾಗಿ ಕೆಲಸ ಮಾಡುತ್ತಿರುವುದು ವಿಪರ್ಯಾಸ. ಈ ಮಧ್ಯೆ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್. ಶೇಷನ್ ಅವರನ್ನು ನೆನಪಿಸಲೇಬೇಕಿದೆ ಎಂದರು.
ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕ ಸುಧೀರ್ ಕುಮಾರ್ ಮುರೊಳ್ಳಿ ಎಸ್‌ಐಆರ್ ಬಗ್ಗೆ ಮಾಹಿತಿ ನೀಡಿದರು.
ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್.ಲೋಬೊ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೊ, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ಪಕ್ಷದ ಮುಖಂಡರಾದ ಪ್ರಭಾಕರ ಶ್ರೀಯಾನ್, ಕೆ.ಪಿ. ಥೋಮಸ್, ಸದಾಶಿವ ಶೆಟ್ಟಿ ಸುರತ್ಕಲ್, ಮುನೀರ್ ಬನ್ಸಾಲ್, ವಿಶ್ವಾಸ್ ಕುಮಾರ್ ದಾಸ್, ಜೆ.ಅಬ್ದುಲ್ ಸಲೀಂ, ಪದ್ಮನಾಭ ಕೋಟ್ಯಾನ್, ಮೋಹನ್ ಕೋಟ್ಯಾನ್, ಪುರುಷೋತ್ತಮ ಚಿತ್ರಾಪುರ, ನಾಗೇಶ್ ಗೌಡ, ಶಾಹುಲ್ ಹಮೀದ್ ಕೆ.ಕೆ, ಅಪ್ಪಿ, ಕೇಶವ ಮರೋಳಿ, ಲ್ಯಾನ್ಸಿ ಲಾಟ್ ಪಿಂಟೊ, ಹೊನ್ನಯ್ಯ, ಮೋಹನ್‌ಚಂದ್ರ, ನೀರಜ್‌ಚಂದ್ರಪಾಲ್, ದಿನೇಶ್ ಮೂಳೂರು, ಪದ್ಮಪ್ರಸಾದ್ ಜೈನ್, ಜೆಸಿಂತಾ ಆಲ್ಫ್ರೆಡ್, ಪ್ರೇಮ್ನಾಥ್, ಮೆಲ್ವಿನ್ ಡಿಸೋಜ, ಅಶೋಕ್ ಡಿ.ಕೆ., ಗಿರೀಶ್ ಶೆಟ್ಟಿ, ಗಿರೀಶ್ ಆಳ್ವ, ರೂಪಾ ಚೇತನ್, ಚಂದ್ರಕಲಾ ಜೋಗಿ, ರಜನೀಶ್, ಹಯಾತುಲ್ಲಾ ಖಾಮಿಲ್, ಇಲ್ಯಾಸ್ ಕಡಬ, ಮುನಿರಾಜ್, ರಾಜೀವ, ನಜೀರ್ ಬಜಾಲ್ ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡೇನಿಸ್ ಡಿಸಿಲ್ವ ಸ್ವಾಗತಿಸಿದರು. ಟಿ.ಕೆ. ಸುಧೀರ್ ವಂದಿಸಿದರು. ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.