ಪಂಪ್‌ವೆಲ್ ಸರ್ಕಲ್-ಕರಾವಳಿ ಜಂಕ್ಷನ್ ಚತುಷ್ಪಥ ರಸ್ತೆ ಕಾಮಗಾರಿ: ನಗರದಲ್ಲಿ ಸಂಚಾರ ಬದಲಾವಣೆ
ಈ ಕಾರಣದಿಂದ ರಸ್ತೆ ಸಂಚಾರ ಬದಲಾವಣೆ ಮಾಡಿ ಮಂಗಳೂರು ನಗರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಪಂಪ್‌ವೆಲ್ ವೃತ್ತದಿಂದ ಕಂಕನಾಡಿ ಹಳೇ ರಸ್ತೆ-ಕಂಕನಾಡಿ ಜಂಕ್ಷನ್‌ಗೆ (ಮಂಗಳೂರು ನಗರಕ್ಕೆ ಒಳಬರುವ ರಸ್ತೆ) ಮತ್ತು ಕರಾವಳಿ ಜಂಕ್ಷನ್‌ನಿಂದ ಪಂಪ್‌ವೆಲ್ ವೃತ್ತದವರೆಗಿನ (ಮಂಗಳೂರು ನಗರದಿಂದ ಹೊರ ಹೋಗುವ ರಸ್ತೆ) ಬೈಪಾಸ್ ರಸ್ತೆಗಳನ್ನು ತಾತ್ಕಾಲಿಕವಾಗಿ ಏಕಮುಖ ರಸ್ತೆಗಳನ್ನಾಗಿ ಮಾರ್ಪಾಡು ಮಾಡಲಾಗಿದ್ದು, ಈ ರಸ್ತೆಯಲ್ಲಿ ವಾಹನ ದಟ್ಟನೆ ಉಂಟಾಗಲಿದ್ದು, ಸಾರ್ವಜನಿಕರು ಈ ಕೆಳಗಿನ ರಸ್ತೆಯನ್ನು ಉಪಯೋಗಿಸಬಹುದಾಗಿದೆ.
ಪಂಪ್‌ವೆಲ್ ಜಂಕ್ಷನ್ ನಿಂದ ಕರಾವಳಿ ಜಂಕ್ಷನ್‌ಗೆ ಹೋಗುವ ವಾಹನಗಳನ್ನು ನಿರ್ಬಂಧಿಸಿ, ಕಂಕನಾಡಿ ಹಳೇ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿ ಕೊಡಲಾಗಿದೆ.
ತಲಪಾಡಿ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳು ಪರ್ಯಾಯ ರಸ್ತೆಯಾದ ಮಹಾಕಾಳಿಪಡ್ಪು, ಮಾರ್ಗನ್ಸ್ ಗೇಟ್, ಕೋಟಿಚೆನ್ನಯ ಸರ್ಕಲ್ ಅಥವಾ ಮಂಗಳಾದೇವಿ ಮುಖಾಂತರ ಸಂಚರಿಸಬೇಕು.
ಬಿ.ಸಿ. ರೋಡ್ ಕಡೆಯಿಂದ ಬರುವಂತಹ ಭಾರಿ ವಾಹನಗಳು, ಇತರೆ ವಾಹನಗಳು ಮತ್ತು ಲಾಲ್‌ಬಾಗ್ ಬಸ್ ನಿಲ್ದಾಣಕ್ಕೆ ತೆರಳುವ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಪಡೀಲ್ ಜಂಕ್ಷನ್‌ನಿಂದ ನಂತೂರು ಕಡೆಗೆ ಹಾಗೂ ಕೇರಳ-ಕಾಸರಗೋಡು ಕಡೆಯಿಂದ ಕರಾವಳಿ ಕಡೆಗೆ ಬರುವ ಭಾರಿ ವಾಹನಗಳು ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಪಂಪ್‌ವೆಲ್ ಜಂಕ್ಷನ್‌ನಿಂದ ನಂತೂರು ಕಡೆಗೆ ಸಂಚರಿಸಬೇಕು.
ಮಂಗಳೂರು ನಗರದ ಒಳಭಾಗದಿಂದ ಕರಾವಳಿ ಜಂಕ್ಷನ್ ಕಡೆಯಿಂದ ಪಂಪ್‌ವೆಲ್ ಕಡೆಗೆ ಸಂಚರಿಸುವ ವಾಹನಗಳು ಯಥವಾತ್ತಾಗಿ ಸಂಚರಿಸಬೇಕು.
ಕಂಕನಾಡಿ ಜಂಕ್ಷನ್-ಪಂಪ್‌ವೆಲ್ ರಸ್ತೆ(ಕಂಕನಾಡಿ ಓಲ್ಡ್ ರಸ್ತೆ), ಕರಾವಳಿ-ಕಂಕನಾಡಿ ರಸ್ತೆ, ಕಂಕನಾಡಿ-ಫಳ್ನೀರ್ ಹೈಲ್ಯಾಂಡ್ ಆಸ್ಪತ್ರೆ ರಸ್ತೆ, ಕರಾವಳಿ-ಬಲ್ಮಠ ರಸ್ತೆ ಹಾಗೂ ಕಂಕನಾಡಿ ಬೈಪಾಸ್ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ.