‘ದಂತ ವೈದ್ಯಕೀಯ ಕಾಲೇಜುಗಳಲ್ಲೂ ಸೀಟ್ ಉಳಿಕೆಯ ಪ್ರಮಾಣ ಕಡಿಮೆ’: ಡಾ. ಎಂ.ಸಿ. ಸುಧಾಕರ್
ನಗರದ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ ಸಂಜೆ ಆರಂಭಗೊಂಡ ಮೂರು ದಿನಗಳ 76ನೇ ಭಾರತೀಯ ದಂತ ವೈದ್ಯಕೀಯ ಸಮ್ಮೇಳನ (ಐಡಿಸಿ)ವನ್ನು ಉದ್ಘಾಟಿಸಿ ಮಾತನಾಡಿದ ಅವರಯಮ ಹಿಂದೆ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್‌ಗಳು ಭರ್ತಿಯಾಗುತ್ತಿರಲಿಲ್ಲ.ದಂತ ವೈದ್ಯಕೀಯ ಕೌನ್ಸೆಲಿಂಗ್ ಪ್ರಕ್ರಿಯೆ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬಂದ ಮೇಲೆ ಬಹುತೇಕ ಎಲ್ಲ ದಂತ ವೈದ್ಯಕೀಯ ಕಾಲೇಜುಗಳಲ್ಲೂ ಸೀಟು ಭರ್ತಿಯಾಗುತ್ತಿವೆ ಎಂದರು.
ಉನ್ನತ ಶಿಕ್ಷಣದಲ್ಲಿ ಹೆಣ್ಣು ಮಕ್ಕಳು ಮುಂದುವರಿದಿದ್ದಾರೆ.ಗಂಡು ಮಕ್ಕಳಿಗಿಂತ ಹೆಚ್ಚು ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ತಮ್ಮ ವ್ಯಾಪ್ತಿಗೊಳಪಟ್ಟಿರುವ ಎಲ್ಲ ವಿವಿಗಳಲ್ಲೂ ಈ ವಿಚಾರವನ್ನು ಗಮನಿಸಿದ್ದೇನೆ. ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಸಾಧನೆ ಗಮನಾರ್ಹವಾಗಿದೆ ಎಂದರು.
ಈಗ ಎಲ್ಲ ಕ್ಷೇತ್ರಗಳಿಗೂ ಕೃತಕ ಎಐ ತಂತ್ರಜ್ಞಾನ ಲಗ್ಗೆ ಇಟ್ಟಿದೆ. ದಂತ ವೈದ್ಯಕೀಯ ಚಿಕಿತ್ಸಾ ವಿಧಾನದಲ್ಲೂ ಸಾಕಷ್ಟು ಬದಲಾವಣೆ ಎಐ ಪರಿಣಾಮ ಆಗಿದೆ. ವೈದ್ಯರು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಮುಂದುವರಿಯಬೇಕಾಗಿದೆ ಎಂದು ಹೇಳಿದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಶುಭ ಹಾರೈಸಿದರು.
ಭಾರತೀಯ ದಂತ ವೈದ್ಯಕೀಯ ಸಂಘದ (ಐಡಿಎ) ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ರ ನಂದಿ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ ಡಾ. ಅಶೋಕ್ ಧೋಬ್ಲೆ , ಡಾ. ಎಸ್. ಕಣ್ಣನ್, ಡಾ.ನಾಗೇಂದ್ರ ಕುಮಾರ್, ಐಡಿಎ ದ.ಕ. ಘಟಕದ ಅಧ್ಯಕ್ಷ ಡಾ.ಜಗದ್ಚಿಂದ್ರ, ಐಡಿಎ ಚುನಾಯಿತ ಅಧ್ಯಕ್ಷ ಮನೋಜ್ ಶ್ರೀವಾಸ್ತವ, ಡಾ. ಸಚಿನ್ ಮೆಹ್ತಾ,ಡಾ. ನರೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಶಿವಶರಣ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಕೆ. ನಿಲ್ಲನ್ ಶೆಟ್ಟಿ ವಂದಿಸಿದರು.
ಜಾಗತಿಕ ತಜ್ಞರ ಸಮಾಗಮ: ದಂತ ವಿಜ್ಞಾನದ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಬೆಳಕು ಚೆಲ್ಲಲು 30ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ಖ್ಯಾತ ವಿಷಯ ತಜ್ಞರು ಆಗಮಿಸಲಿದ್ದಾರೆ.
ಬೃಹತ್ ಪ್ರದರ್ಶನ..
ಈ ಮೆಗಾ ಇವೆಂಟ್‌ನಲ್ಲಿ 200ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಲಿದ್ದು, ಅತ್ಯಾಧುನಿಕ ದಂತ ವೈದ್ಯಕೀಯ ಉಪಕರಣಗಳು ಮತ್ತು ತಂತ್ರಜ್ಞಾನದ ಬೃಹತ್ ಮೇಳ ಆಯೋಜಿಸಲಾಗಿದೆ.