ಸಿಇಟಿ: ತಾಂತ್ರಿಕ ತೊಡಕು ನಿವಾರಿಸುವ ಭರವಸೆ

ಸಿಇಟಿ: ತಾಂತ್ರಿಕ ತೊಡಕು ನಿವಾರಿಸುವ ಭರವಸೆ


ಮಂಗಳೂರು: ರಾಜ್ಯದ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಭಾಷಾ ಅಲ್ಪಸಂಖ್ಯಾತ (ತಮಿಳು, ತೆಲುಗು, ಕೊಡವ ಹಾಗೂ ತುಳು) ವಿದ್ಯಾರ್ಥಿಗಳಿಗೆ ಸಿಇಟಿ ದಿಕ್ಸೂಚಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಅನುಬಂಧ-‘ಎ’ಗೆ ಸಂಬಂಧಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂಬ ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ (ಕುಪ್ಮ) ಪದಾಧಿಕಾರಿಗಳ ಕೋರಿಕೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 


ಈಚೆಗೆ ಬೆಂಗಳೂರಿನ ನಿವಾಸದಲ್ಲಿ ಸಚಿವರನ್ನು ಭೇಟಿ ಮಾಡಿದ ಕುಪ್ಮ ಪದಾಧಿಕಾರಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ದಿಕ್ಸೂಚಿ ಸಾಮಾನ್ಯ ಪ್ರವೇಶ ಪರೀಕ್ಷೆ-2026ಕ್ಕೆ ಸಂಬಂಧಿಸಿ ಕೈಪಿಡಿಯ 22ನೇ ಪುಟದಲ್ಲಿ 19ನೇ ವಿಷಯದಲ್ಲಿ ಭಾಷಾ ಅಲ್ಪಸಂಖ್ಯಾತರು (ವೈದ್ಯಕೀಯ ಮತ್ತು ದಂತ ವೈದ್ಯಕೀಯಕ್ಕೆ ಮಾತ್ರ) ಎಂಬಲ್ಲಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುವ ನಿಯಮದಲ್ಲಿ ವಿದ್ಯಾರ್ಥಿಯು ಒಂದರಿಂದ 10ನೇ ತರಗತಿವರೆಗೆ 10 ವರ್ಷ ಭಾಷಾ ಅಲ್ಪಸಂಖ್ಯಾತನಾಗಿದ್ದರೆ ಅಂತಹವರಿಗೆ ಅನುಬಂಧ-5ಎ ಯಲ್ಲಿ ಕಾಲೇಜಿನ ಪ್ರಾಂಶುಪಾಲರ ದೃಢೀಕರಣದೊಂದಿಗೆ ಕೊಡಬಹುದು ಎಂದು ತಿಳಿಸಲಾಗಿದೆ. ಆದರೆ, ಈ ದೃಢೀಕರಣಕ್ಕೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿಲ್ಲ ಎಂದರು.

ಸ್ಯಾಟ್ಸ್‌ನಲ್ಲಿ, ಮುದ್ರಿತ ವರ್ಗಾವಣೆ ಪ್ರಮಾಣಪತ್ರದಲ್ಲಿ ಭಾಷಾ ಅಲ್ಪಸಂಖ್ಯಾತ ಕಾಲಂ ಇಲ್ಲ. ಪ್ರಥಮ ಪಿಯುಸಿ ದಾಖಲಾತಿ ಅರ್ಜಿಯಲ್ಲಿ ಈ ಕಾಲಂ ಇಲ್ಲದಿರುವುದರಿಂದ ಸಿಇಟಿ ಪರೀಕ್ಷೆ-2026 ಅನ್ನು ಪರಿಗಣಿಸಲು ಕಷ್ಟವಾಗುತ್ತಿದೆ. ಸಿಇಟಿ ಅರ್ಜಿ ತುಂಬಲು ಫೆ.22 ಕೊನೆಯ ದಿನವಾಗಿದೆ ಎಂದು ಸಚಿವರಿಗೆ ತಿಳಿಸಿದಾಗ, ತಕ್ಷಣ ಸಚಿವರು, ಶಾಲಾ ಶಿಕ್ಷಣ (ಪದವಿ ಪೂರ್ವ) ನಿರ್ದೇಶಕ ಭರತ್ ಹಾಗೂ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಜಿ.ಟಿ ನಿಟ್ಟಾಲಿ ಅವರಿಗೆ ಸಮಸ್ಯೆ ಬಗೆಹರಿಸಲು ಸೂಚಿಸಿದರು. 

ಅನುಬಂಧ 5ಎ ಬದಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಹಿ ಇರುವ ಅನುಬಂಧ-5 ಅನ್ನು ಸಿಇಟಿ ಅರ್ಜಿಯಲ್ಲಿ ಸಲ್ಲಿಸಲು ಕೆಇಎ ಒಪ್ಪಿಗೆ ಸೂಚಿಸಿ, ಒಂದು ವಾರ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡುವುದಾಗಿ ತಿಳಿಸಿದೆ. ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಕುಪ್ಮದ ಬೇಡಿಕೆಗೆ ಸ್ಪಂದಿಸಿದ್ದಾರೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. 

ನಿಯೋಗದಲ್ಲಿ ಕುಪ್ಮ ರಾಜ್ಯ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್, ಉಪಾಧ್ಯಕ್ಷ ಯುವರಾಜ್ ಜೈನ್, ಬೆಂಗಳೂರು ಅಧ್ಯಕ್ಷ ದೇವರಾಜ್, ಕೋಶಾಧಿಕಾರಿ ರಮೇಶ್ ಕೆ, ರಾಜ್ಯ ಸಮಿತಿ ಸದಸ್ಯ ಕೀರ್ತನ್ ಬೆಂಗಳೂರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article