ಮೂಡುಬಿದಿರೆ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನ: ಸವಾ೯ಧ್ಯಕ್ಷರಾಗಿ ಅಬ್ದುಲ್ ಹಮೀದ್ ಪಕ್ಕಲಡ್ಕ

ಮೂಡುಬಿದಿರೆ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನ: ಸವಾ೯ಧ್ಯಕ್ಷರಾಗಿ ಅಬ್ದುಲ್ ಹಮೀದ್ ಪಕ್ಕಲಡ್ಕ


ಮೂಡುಬಿದಿರೆ: ಮೂಡುಬಿದಿರೆ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಮಿಜಾರಿನ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ (ಕ.ಸಾ.ಪ) ಮೂಡುಬಿದಿರೆ ತಾಲೂಕು ಅಧ್ಯಕ್ಷ ಕೆ. ವೇಣುಗೋಪಾಲ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ 21ರಂದು ಕಡಂದಲೆಯ ಶ್ರೀ ನಾರಾಯಣಗುರು ಸಭಾಭವನದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಮಂಗಳೂರು ತಾಲೂಕಿನ ಕಂಕನಾಡಿ ಗ್ರಾಮದ ಪಕ್ಕಲಡ್ಕದ ಅಹಮ್ಮದ್ ಕೆ.ಪಿ. ಹಾಗೂ ಫಾತಿಮಾ ದಂಪತಿಯ ಪುತ್ರರಾಗಿ 1947ರಲ್ಲಿ ಜನಿಸಿದ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರು ಬಿ.ಕಾಂ ಪದವೀಧರರು. 1968ರಲ್ಲಿ ರಾಜ್ಯ ಸರ್ಕಾರದ ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ನಂತರ ಪ್ರಥಮ ದರ್ಜೆ ಸಹಾಯಕ ಹಾಗೂ ಅಧೀಕ್ಷಕರಾಗಿ ಪದೋನ್ನತಿ ಪಡೆದು 37 ವರ್ಷಗಳ ಸೇವೆಯ ನಂತರ 2005ರಲ್ಲಿ ನಿವೃತ್ತರಾದರು.

ಸಾಹಿತ್ಯ ಕ್ಷೇತ್ರದಲ್ಲೂ ತಮ್ಮದೇ ಗುರುತು ಮೂಡಿಸಿರುವ ಅವರು ಸಣ್ಣಕಥಾ ರಚನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ‘ಪಾದದಡಿಯ ಸ್ಪರ್ಗ’, ‘ಬಿಳಿಗೋಡೆ’, ‘ಅಲೆಮಾರಿ’, ‘ಭ್ರಮೆ’, ‘ಒಂಟಿತೆಪ್ಪ’, ‘ನೆನಪುಗಳು ಸಾಯುವುದಿಲ್ಲ’, ‘ಮೋಹಕ್ಷಯ’ ಮತ್ತು ‘ಹಾದಿಯೇ ಇಲ್ಲದ ಹಾದಿ’ ಎಂಬ ಎಂಟು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಪಾದದಡಿಯ ಸ್ಪರ್ಗ’ ಕೃತಿ ಶ್ರೀಮತಿ ಝುಬೇದ ಗುರುಪುರ ಅವರಿಂದ ‘ಕಾಲಡಿರೆ ಸ್ವರ್ಗ’ ಎಂಬ ಹೆಸರಿನಲ್ಲಿ ಬ್ಯಾರಿ ಭಾಷೆಗೆ ಅನುವಾದಗೊಂಡಿದೆ.

‘ಭ್ರಮೆ’ ಕಥಾಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿ (2017), ‘ಅಲೆಮಾರಿ’ ಸಂಕಲನಕ್ಕೆ ಪಿ. ಲಂಕೇಶ್ ಪ್ರಶಸ್ತಿ ಹಾಗೂ ಮುಸ್ಲಿಂ ಸಾಹಿತ್ಯ ಪ್ರಶಸ್ತಿ (2009), ‘ಒಂಟಿತೆಪ್ಪ’ ಸಂಕಲನಕ್ಕೆ ನಿರತ ಸಾಹಿತ್ಯ ಪ್ರಶಸ್ತಿ (2020) ಮತ್ತು ಬಾಂಧವ್ಯ ಕಥಾ ಪುರಸ್ಕಾರ (2020) ಲಭಿಸಿದೆ. ಅಲ್ಲದೆ, ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ನೀಡುವ ಬ್ಯಾರಿ ಭಾಷಾ ಕಥಾ ಸ್ಪರ್ಧಾ ಪುರಸ್ಕಾರ (2020)ವೂ ಇವರಿಗೆ ಸಂದಿದೆ.

ಕೃಷಿ ಆಸಕ್ತಿಯ ಜೊತೆಗೆ ಯೋಗ ಮತ್ತು ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರು ಸಾಹಿತ್ಯ ಮತ್ತು ಜೀವನ ಮೌಲ್ಯಗಳ ಸಂಗಮವಾಗಿ ಕಾಣಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article