ಡಾ.ಶಿರೂರು ಅವರಿಗೆ ಒಲಿದು ಬಂದ ಕವಿ ಕಾವ್ಯ ಭೂಷಣ ಪ್ರಶಸ್ತಿ: ಡಾ.ವಾಮನ್ ರಾವ್ ಬೇಕಲ್
2026 ಫೆಬ್ರವರಿ 22ರಂದು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದಲ್ಲಿ ನಡೆಯುವ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿರುತ್ತಾರೆ.
ಎಂ.ಎ.,ಬಿ.ಎಡ್. ಪದವೀಧರರಾದ ಡಾ. ಶಿರೂರು ಅವರು ಹಿಂದಿ ಭಾಷೆಯಲ್ಲಿ ರಾಜಭಾಷಾ ವಿದ್ವಾನ್ ಪದವಿಯನ್ನು ಪಡೆದಿರುತ್ತಾರೆ. ಇವರು ಮೂಲತಃ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಮೇಲ್ಪಂಗ್ತಿ ಶಾನುಭೋಗರ ಮನೆತನಕ್ಕೆ ಸೇರಿದ ಭವಾನಿ ಶಂಕರ ಶಾನುಭೋಗ ಮತ್ತು ಶ್ರೀಮತಿ ಸರೋಜಿನಿ ಶಾನುಭೋಗ ಇವರ ಪುತ್ರ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು 1995 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಹೋಲಿ ರೋಸರಿ ಪ್ರೌಢಶಾಲೆಯಲ್ಲಿ ಕನ್ನಡ ಆಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಇವರು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ, ಜಿಲ್ಲಾಧ್ಯಕ್ಷರಾಗಿ, ರಾಜ್ಯ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದು ಪ್ರಸ್ತುತ ಮೂಡುಬಿದರೆ ತಾಲೂಕು ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ಹೋಬಳಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕರ್ನಾಟಕ ರಾಜ್ಯ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ ಸೌರಭ ಮೂಡುಬಿದಿರೆ ಮತ್ತು ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ ಮೂಡುಬಿದಿರೆ ಇದರ ಅಧ್ಯಕ್ಷರಾಗಿದ್ದು ಸಾಹಿತ್ಯ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ.