ಎನ್‌ಎಸ್‌ಎಸ್ ಶಿಬಿರದಿಂದ ‘ಜೀವನಪಾಠ’: ಮಾಜಿ ಸೈನಿಕ ಡಿ.ಅಮ್ಮಣ್ಣ ರೈ
Thursday, February 5, 2026
ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಸಮಯದ ಪಾಲನೆ ಅತ್ಯಂತ ಮುಖ್ಯ. ಶಿಸ್ತು ಮತ್ತು ಸೇವಾ ಮನೋಭಾವನೆಯಿಂದ ಮಾತ್ರ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಲು ಸಾಧ್ಯ, ಎಂದು ಪಾಪೆಮಜಲು ಸರ್ಕಾರಿ ಪ್ರೌಢಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಸ್ಥಾಪಕಾಧ್ಯಕ್ಷರು ಹಾಗೂ ಮಾಜಿ ಸೈನಿಕ ಡಿ.ಅಮ್ಮಣ್ಣ ರೈ ಅವರು ಹೇಳಿದರು.
ಅರಿಯಡ್ಕದ ಸ.ಪ್ರೌ.ಶಾಲೆ ಪಾಪೆಮಜಲಿನಲ್ಲಿ ಫೆಬ್ರವರಿ 3ರಿಂದ 9ರ ವರೆಗೆ ನಡೆಯಲಿರುವ ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ ನನ್ನ ಭಾರತಕ್ಕಾಗಿ ಯುವಜನತೆ ಎಂಬ ಆಶಯದೊಂದಿಗೆ ಆಯೋಜಿಸಲಾದ ಈ ಶಿಬಿರ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಹಾಗೂ ಶಿಸ್ತುವಿಗೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ಅನುಭವವು ಮನುಷ್ಯನ ಬದುಕಿನ ದೃಷ್ಟಿಕೋನವನ್ನೇ ಬದಲಿಸುವ ಶಕ್ತಿ ಹೊಂದಿದೆ. ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳಿಗೆ ಕೇವಲ ಕೆಲಸವನ್ನಷ್ಟೇ ಕಲಿಸುವುದಿಲ್ಲ, ಬದಲಾಗಿ ಜೀವನದ ಪಾಠಗಳನ್ನು ಕಲಿಸುತ್ತವೆ. ಸೇವೆ ಕೇವಲ ಪ್ರದರ್ಶನವಾಗದೆ ಅದು ಮನದಾಳದಿಂದ ಬರಬೇಕು. ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಜಯಂತ ನಡುಬೈಲ್, ಇಕ್ಬಾಲ್ ಹುಸೈನ್, ಮೋಹನದಾಸ್ ರೈ, ಶಿವಪ್ಪ ಕುಲಾಲ್, ಮೋನಪ್ಪ ಪೂಜಾರಿ, ಪುಷ್ಪಲತಾ ಪಾಪೆಮಜಲು, ತಿಲಕ್ ರೈ ಕುತ್ಯಾಡಿ ಹಾಗೂ ವಾಸು ಪೂಜಾರಿ ಗುಂಡ್ಯಡ್ಕ ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಕೆ. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಕ ನಾಯಕ ಮನೀಶ್ ಸ್ವಾಗತಿಸಿದರು. ಯೋಜನಾಧಿಕಾರಿ ಪುಷ್ಪಾ ಎನ್. ವಂದಿಸಿದರು. ಘಟಕ ನಾಯಕಿ ಜೆ. ಲವಿಕಾ ಕಾರ್ಯಕ್ರಮ ನಿರೂಪಿಸಿದರು. ಏಳು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.




