ಮಾ.3 ರಂದು ಬ್ರಹ್ಮರಕೊಟ್ಲು ತೆರವುಗೆ ಆಗ್ರಹಿಸಿ ಸಾಮೂಹಿಕ ಧರಣಿ: ಬಿ. ರಮಾನಾಥ ರೈ
ಶನಿವಾರ ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30 ರವರೆಗೆ ಧರಣಿ ನಡೆಯಲಿದೆ.ಈ ಹೋರಾಟಕ್ಕೆ ವಾಹನ ಚಾಲಕ,ಮಾಲಕರ ಸಹಿತ ಜಿಲ್ಲೆಯ ವಿವಿಧ ಸಂಘಟನೆಗಳು ಕೂಡ ಈಗಾಗಲೇ ಬೆಂಬಲವನ್ನು ಸೂಚಿಸಿದ್ದು,ಧರಣಿಯಲ್ಲು ಪಾಲ್ಗೊಳ್ಳಲಿದ್ದಾರೆ ಎಂದರು.
ಎರಡು ಟೋಲ್ ಗೇಟ್‌ಗಳ ನಡುವೆ ಇರಬೇಕಾದ ಕನಿಷ್ಟ ಅಂತರ, ಸರ್ವೀಸ್ ರಸ್ತೆಗಳು, ತಡೆಯಿಲ್ಲದ ಸಂಚಾರದ ಅವಕಾಶ ಸಹಿತ ಬಹುತೇಕ ನಿಯಮಗಳನ್ನು ಉಲ್ಲಂಘಿಸಿ ಬ್ರಹ್ಮರಕೊಟ್ಟು ಟೋಲ್ ಗೇಟ್‌ನಲ್ಲಿ ಸುಂಕ ಸಂಗ್ರಹಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಿಸು ತ್ತಿರುವ ಬ್ರಹ್ಮರಕೊಟ್ಟು ಟೋಲ್ ಕೇಂದ್ರವನ್ನು ಶಾಸ್ವತವಾಗಿ ತೆರವುಗೊಳಿಸಬೇಕು, ಇಲ್ಲದಿದ್ದಲ್ಲಿ ಹಂತ, ಹಂತವಾಗಿ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ದೇಶದ ಯಾವ ಮೂಲೆಯಲ್ಲು ಬ್ರಹ್ಮರಕೊಟ್ಲು ವಿನಂತಹ ಟೋಲ್ ಕೇಂದ್ರ ಇಲ್ಲ ಎಂದ ಅವರು ಈಗಾಗಲೇ ೨೩ ವರ್ಷಗಳ ದೀರ್ಘ ಅವಧಿಯನ್ನು ಈ ಟೋಲ್ ಕೇಂದ್ರ ದಾಟಿದೆ. ಯಾವುದೇ ಬೈಪಾಸ್ ರಸ್ತೆಗಳು, ಮೇಲ್ಸ್ ತುವೆ, ಕೆಳ ಸೇತುವೆಗಳು, ಸರ್ವೀಸ್ ರಸ್ತೆಗಳ ಸಹಿತ ಮೂಲಭೂತ ಸೌಲಭ್ಯಗಳು ಇಲ್ಲದ ಈ ರಸ್ತೆಯಲ್ಲಿ ಟೋಲ್ ಸಂಗ್ರಹ ಮುಂದುವರಿಸುವುದು ಯಾವುದೇ ಕಾರಣಕ್ಕೂ ನ್ಯಾಯಯುತ ಅಲ್ಲ ಎಂದರು.
ಈ ನಡುವೆ ವಳಾಲು, ಗಂಜಿಮಠ, ಪಣಕಜೆ ಎಂಬಲ್ಲಿ ಮೂರು ಟೋಲ್ ಕೇಂದ್ರ ನಿರ್ಮಾಣವಾಗಲಿದೆ.ಈ ಮೂರು ಟೋಲ್ ಕೇಂದ್ರ ಬ್ರಹ್ಮರಕೊಟ್ಲು ಟೋಲ್ ಗೇಟ್ ನಿಂದ ಸರಾಸರಿ 30 ಕಿ.ಮೀ. ದೂರದಲ್ಲಿದೆ.
ಇಲ್ಲು ನಿಯಮ ಉಲ್ಲಂಘಿಸಲಾಗಿದ್ದು, ಈ ನಿಟ್ಟಿನಲ್ಲಿ ರಾ.ಹೆ.ಪ್ರಾ.ದ ಅಧಿಕಾರಿಗಳು ಜನಪ್ರತಿನಿಧಿಗಳ, ವಿವಿಧ ಸಂಘಟನೆಗಳ ಮುಖಂಡರ ಸಭೆ ಕರೆದು ಚರ್ಚಿಸಬೇಕು, ರಾ.ಹೆ.ಪ್ರಾ. ಸ್ವಯಂಪ್ರೇರಿತವಾಗಿ ಬ್ರಹ್ಮರಕೊಟ್ಲು ತೆರವುಗೊಳಿಸಿದರೆ ಸ್ವಾಗತಿಸಲಾಗುವುದು, ಇಲ್ಲದಿದ್ದಲ್ಲಿ ಈ ಟೋಲ್ ಶಾಶ್ವತವಾಗಿ ತೆರವುಗೊಳ್ಳುವವರೆಗೂ ಶಾಂತಯತವಾದ ಹೋರಾಟ ಮುಂದುವರಿಯಲಿದೆ ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ತಿಳಿಸಿದರು.
ಸಮಿತಿ ಸಂಚಾಲಕರಾದ ಬಿ. ಶೇಖರ್, ಮೋಹನ್ ಶೆಟ್ಟಿ, ಪ್ರಮುಖರಾದ ಪಿಯೂಸ್ ಎಲ್. ರೊಡ್ರಿಗಸ್, ಬೇಬಿಕುಂದರ್ ಮತ್ತಿತರರು ಉಪಸ್ಥಿತರಿದ್ದರು.