ಪೌರ ಕಾರ್ಮಿಕರ ಹೆಸರಿನಲ್ಲಿ ಸಹಕಾರಿ  ಬ್ಯಾಂಕ್‌ನಿಂದ ಸಾಲ ಪಡೆದು ವಂಚನೆ: ದಲಿತ ಮಾಸಿಕ ಸಭೆ

ಪೌರ ಕಾರ್ಮಿಕರ ಹೆಸರಿನಲ್ಲಿ ಸಹಕಾರಿ ಬ್ಯಾಂಕ್‌ನಿಂದ ಸಾಲ ಪಡೆದು ವಂಚನೆ: ದಲಿತ ಮಾಸಿಕ ಸಭೆ


ಮಂಗಳೂರು: ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಆರೋಗ್ಯ ಅಧಿಕಾರಿಯ ನಕಲಿ ಸಹಿ, ನಕಲಿ ವೇತನ ಚೀಟಿ, ನಕಲಿ ಮೊಹರು, ನಕಲಿ ಕಾಗದ ಪತ್ರಗಳ ಮೂಲಕ ಪೌರ ಕಾರ್ಮಿಕರ ಹೆಸರಿನಲ್ಲಿ ಸಹಕಾರಿ ಬ್ಯಾಂಕ್‌ನಿಂದ ಸಾಲ ಪಡೆದು ವಂಚಿಸಲಾಗಿದೆ ಎಂದು ದಲಿತ ಮುಖಂಡರು ಮಂಗಳೂರು ಪೊಲೀಸರಿಗೆ ಅಹವಾಲು ಸಲ್ಲಿಸಿದ್ದಾರೆ.

ಮಂಗಳೂರು ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಅಧ್ಯಕ್ಷತೆಯಲ್ಲಿ ಶನಿವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಮಾಸಿಕ ಸಭೆಯಲ್ಲಿ ದಲಿತ ಮುಖಂಡ ಅನಿಲ್ ಕುಮಾರ್ ಅವರು ಈ ವಿಷಯ ಪ್ರಸ್ತಾವಿಸಿದರು.

ಕೆಲ ನೈಜ ಪೌರ ಕಾರ್ಮಿಕರು ಬ್ಯಾಂಕ್ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಹಲವು ಮಂದಿ ಈಗಾಗಲೇ ಸಾಲ ಪಡೆದಿರುವ ಬಗ್ಗೆ ಮಾಹಿತಿ ದೊರೆತಾಗ ಈ ಬಗ್ಗೆ ದಲಿತ ಮುಖಂಡ ವಿಶು ಕುಮಾರ್ ಅವರು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ದಾಖಲೆಗಳನ್ನು ಕಲೆ ಹಾಕಿದಾಗ ಈ ವಿಷಯ ತಿಳಿಯಿತು ಎಂದು ಅನಿಲ್ ಕುಮಾರ್ ಸಭೆಯಲ್ಲಿ ತಿಳಿಸಿದರು.

ಈ ರೀತಿಯಾಗಿ ನಕಲಿ ದಾಖಲೆಗಳ ಮೂಲಕ ಕೆಲ ಮನಪಾ ಸಿಬ್ಬಂದಿ ಹೆಸರಿನಲ್ಲಿ, ಮತ್ತೆ ಕೆಲ ಪೌರ ಕಾರ್ಮಿಕರಲ್ಲದ ಮತ್ತು ಸಿಬ್ಬಂದಿ ಅಲ್ಲದ ವ್ಯಕ್ತಿಗಳಿಗೆ ಸಾಲ ಕೊಡಿಸಿ ಸುಮಾರು 20 ಸಾವಿರದಿಂದ 50 ಸಾವಿರ ರೂ.ವರೆಗೆ ಕಮಿಷನ್ ಪಡೆದು ಪಾಲಿಕೆಗೆ ವಂಚನೆ ಮಾಡಲಾಗಿದೆ. ಈ ಮೂಲ ಮನಪಾ ಹಾಗೂ ರಾಜ್ಯದ ಬೊಕ್ಕಸಕ್ಕೆ ಕೋಟಿಗಟ್ಟಲೆ ಹಣ ವಂಚನೆ ಮಾಡಲಾಗಿದೆ. ಕೇಂದ್ರ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಪಾಲಿಕೆ ಆಯುಕ್ತರಿಂದ ಸಾಲಕ್ಕಾಗಿ ಸಲ್ಲಿಕೆಯಾದ ಪೌರ ಕಾರ್ಮಿಕರ ಅರ್ಜಿಯ ವಿಲೇಗಾಗಿ ವೇತನ ದೃಢೀರಣ ಪತ್ರ ಕೋರಿದ್ದಾರೆ. ಆದರೆ ಬ್ಯಾಂಕ್‌ಗೆ ನೀಡಲಾದ ದಾಖಲೆಗಳು ನಕಲಿಯಾಗಿದ್ದು, ಅಂತಹ ವ್ಯಕ್ತಿಗಳು ಪೌರಕಾರ್ಮಿಕರಾಗಿ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ಪಾಲಿಕೆ ಆಯುಕ್ತರು ಕೇಂದ್ರ ಸಹಕಾರಿ ಬ್ಯಾಂಕ್ಗೆ ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳನ್ನು ದೂರಿನಲ್ಲಿ ಲಗತ್ತಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಆಗಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.


ಕೃಷಿ ಭೂಮಿ ಒದಗಿಸಿ:

ಬಾಳೆಪುಣಿ ಗ್ರಾಮದಲ್ಲಿ ಬಾಬು ಕೊರಗ ಎಂಬವರು ಕೃಷಿಗಾಗಿ ಒಂದು ಎಕರೆ ಜಮೀನು ನೀಡಲು ಅರ್ಜಿ ನೀಡಿದಾಗ ಅದು ಗೋಮಾಳವೆಂದು ಹೇಳಿ ತಿರಸ್ಕೃರಿಸಲಾಗಿದೆ. ಆದರೆ ಅಲ್ಲಿ ಇತರರಿಗೆ ಕೃಷಿ ಭೂಮಿ ಮಂಜೂರು ಆಗಿದೆ. ಕೊರಗ ಸಮುದಾಯದ ವ್ಯಕ್ತಿಗೆ ಗೋಮಾಳವಾಗುವ ಜಾಗ ಇತರರಿಗೆ ಹೇಗೆ ಮಂಜೂರು ಆಗಿರುವುದು ಎಂಬ ಬಗ್ಗೆ ತನಿಖೆ ಆಗಬೇಕು ಎಂದು ದಲಿತ ಮುಖಂಡ ಎಸ್.ಪಿ. ಆನಂದ ಆಗ್ರಹಿಸಿದರು.

ಬ್ಯಾಂಕ್ ಸಾಲ ಆರೋಪ:

ಕೊಣಾಜೆಯ ಖಾಸಗಿ ಐಟಿಐಯ ಪ್ರಾಂಶುಪಾಲರೊಬ್ಬರು ತಮ್ಮ ಸಂಸ್ಥೆಯ ಉಪನ್ಯಾಸಕಿಯ ವೇತನ ಪ್ರಮಾಣ ಪತ್ರದ ಆಧಾರದಲ್ಲಿ ಬ್ಯಾಂಕ್‌ನಿಂದ  ಸಾಲ ಪಡೆದು ಕಿರುಕುಳ ನೀಡಿದ್ದಾರೆ ಎಂದು ದಲಿತ ಮುಖಂಡರೊಬ್ಬರು ದೂರಿದರು.

ಈ ಬಗ್ಗೆ ಸಂಸ್ಥೆಯ ಇನ್ನೋರ್ವ ಉಪನ್ಯಾಸಕಿಯಿಂದ ದೂರು ಬಂದಿದೆ. ಪ್ರಾಂಶುಪಾಲರ ಮೇಲಿನ ವಿಶ್ವಾಸದಿಂದ ತಮ್ಮ ಹೆಸರಿನಲ್ಲಿ 2 ಲಕ್ಷ ರೂ. ಸಾಲ ಪಡೆದು ನೀಡಿದ್ದು ಇದೀಗ ಚೆಕ್ ಬೌನ್ಸ್ ಆಗಿ ವಾರೆಂಟ್ ಆಗಿರುವ ಬಗ್ಗೆ ದೂರು ದಾಖಲಾಗಿದೆ ಎಂದು ಸಭೆಯಲ್ಲಿದ್ದ ಎಸಿಪಿ ತಿಳಿಸಿದರು. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಡಿಸಿಪಿ ಮಿಥುನ್ ಸೂಚನೆ ನೀಡಿದರು.


ಅಂಬೇಡ್ಕರ್ ಪ್ರತಿಮೆ-ವೃತ್ತ ನಿರ್ಮಾಣವಾಗದಿದ್ದರೆ ಪ್ರತಿಭಟನೆ

ಮೂರ್ನಾಲ್ಕು ದಶಕಗಳಿಂದ ಮಂಗಳೂರು ಹೃದಯ ಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಪ್ರತಿಮೆಯೊಂದಿಗೆ ವೃತ್ತ ನಿರ್ಮಾಣದ ದಲಿತರ ಬೇಡಿಕೆ ಮಾತ್ರ ಈಡೇರುತ್ತಿಲ್ಲ. ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದ್ದರೂ ವೃತ್ತ ನಿರ್ಮಾಣ ಆಗದಿರಲು ಕಾರಣವೇನು ಎಂದು ತಿಳಿಯುತ್ತಿಲ್ಲ. ನಮ್ಮ ತಾಳ್ಮೆಯ ಕm ಒಡೆದಿದೆ. ಟ್ರಾಫಿಕ್‌ಗೆ ಸಮಸ್ಯೆ ಆಗದಂತೆ ಅಂಬೇಡ್ಕರ್‌ರವರ ಪುತ್ಥಳಿಯೊಂದಿಗೆ ವೃತ್ತ ನಿರ್ಮಾಣ ನಮ್ಮ ಬೇಡಿಕೆ ಈಡೇರದಿದ್ದರೆ ಎ.14 ರಂದು ಪ್ರತಿಭಟನೆ ಅನಿವಾರ್ಯ ಎಂದು ದಲಿತ ಮುಖಂಡರು ಎಚ್ಚರಿಸಿದರು.

ಡಿಸಿಪಿ ರವಿಶಂಕರ್ ಉಪಸ್ಥಿತರಿದ್ದರು. ಇನ್ಸ್‌ಪೆಕ್ಟರ್ ನಾಗರಾಜ್ ಸ್ವಾಗತಿಸಿ, ಹಿಂದಿನ ಸಭೆಯ ನಡಾವಳಿಯ ವಿವರ ನೀಡಿದರು. ಇನ್ಸ್‌ಪೆಕ್ಟರ್ ಮುಹಮ್ಮದ್ ಸಲೀಂ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article