ಮುಂದಿನ 4 ತಿಂಗಳು ನೀರಿನ ಶೇಖರಣೆಯನ್ನು ಕಾಯ್ದುಕೊಳ್ಳುವುದು ಅವಶ್ಯಕ: ದಿನೇಶ್ ಗುಂಡೂರಾವ್
ತುಂಬೆ ವೆಂಟೆಡ್ ಡ್ಯಾಂನಲ್ಲಿ ಬುಧವಾರ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿ, ಬಳಿಕ ಗಂಗಾಪೂಜೆಯಲ್ಲಿ ಭಾಗವಹಿಸಿ ಅವರ ಮಾತನಾಡಿದರು.
ಈ ವರ್ಷ ಬೇಸಿಗೆ ಅವಧಿ ಹೆಚ್ಚಾಗಿ, ಮಳೆ ತಡವಾಗುವ ಸಾಧ್ಯತೆಯಿರುವುದರಿಂದ ಜೂನ್ ತಿಂಗಳವರೆಗೆ ನೀರಿನ ಲಭ್ಯತೆಯನ್ನು ಕಾಯ್ದಿರಿಸುವುದು ಅತೀ ಮುಖ್ಯವಾಗಿದೆ ಎಂದ ಅವರು ಪ್ರಸ್ತುತ ತುಂಬೆ ವೆಂಟೆಡ್ ಡ್ಯಾಂ ಮತ್ತು ಎಎಂಆರ್ ಡ್ಯಾಂನಲ್ಲಿ ಸಾಕಷ್ಟು ನೀರಿನ ಸಂಗ್ರಹಣೆಯಿದೆ. ಈ ವರ್ಷ ನೀರಿನ ಹಾಹಾಕಾರ ಬಾರದಿರಲಿ ಎಂದು ಗಂಗಾದೇವಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಗಿದೆ ಎಂದು ತಿಳಿಸಿದರು.
‘ಜಲಸಿರಿ’ ಯೋಜನೆಯಡಿ ಮಂಗಳೂರು ನಗರಕ್ಕೆ 24*7 ನೀರು ಸರಬರಾಜು ವ್ಯವಸ್ಥೆಯ ವಿತರಣಾ ಜಾಲದ ಬಲಪಡಿಸುವಿಕೆ ಮತ್ತು 8 ವರ್ಷಗಳ ಅವಧಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆ ಒಳಗೊಂಡ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗಿದ್ದು, ಯೋಜನೆಯು ಪೂರ್ಣಗೊಂಡ ನಂತರ ನಗರದ ಎಲ್ಲಾ ಜನತೆಗೆ ನಿರಂತರವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಮೆಸ್ಕಾಂ ನಿಗಮದ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಾಜಿ ಸಚಿವ ಬಿ. ರಮಾನಾಥ ರೈ, ಮನಪಾ ಉಪ ಆಯುಕ್ತ ನರೇಶ್ ಶೆಣೈ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮಾಜಿ ಕಾರ್ಪೋರೇಟರ್‌ಗಳಾದ ಪ್ರವೀಣ್ ಚಂದ್ರ, ಅನಿಲ್ ಕುಮಾರ್, ವಿನಯ್ ರಾಜ್, ಸಹಾಯಕ ಎಂಜಿನಿಯರ್ ಅಶ್ವಿನ್ ಎಸ್. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುನೀತ್ ಮತ್ತಿತರರು ಭಾಗವಹಿಸಿದ್ದರು.
ಮನಪಾ ಆಯುಕ್ತ ರವಿಚಂದ್ರ ನಾಯ್ಕ್ ಸ್ವಾಗತಿಸಿ, ವಂದಿಸಿದರು.