ಆಧಾರ್ ಪತ್ತೆ: ಫರಂಗೀಪೇಟೆ ಅಂಚೆ ಕಚೇರಿ ಮೇಲೆ ಕೇಸು ದಾಖಲು
ಮಂಗಳವಾರ ಸಂಜೆ ಸ್ಥಳೀಯ ನಿವಾಸಿಗಳ 2013 ರಿಂದ 2023 ರ ವರೆಗಿನ ಸುಮಾರು ನೂರಾರು ಮೂಲ ಆಧಾರ್ ಕಾರ್ಡ್‌ಗಳು ನದಿತೀರದಲ್ಲಿ ಸ್ಥಳೀಯರಿಗೆ ಪತ್ತೆಯಾಗಿತ್ತು. ಆಧಾರ್ ಕಾರ್ಡ್ ಪ್ರತಿಗಳಲ್ಲಿ ಫರಂಗಿಪೇಟೆ ಅಂಚೆ ಕಚೇರಿಯ ಸೀಲ್ ಪತ್ತೆಯಾಗಿದೆಯೆನ್ನಲಾಗಿದೆ.
ಆಧಾರ್ ಕಾರ್ಡ್‌ನ್ನು ವಿಳಾಸಹೊಂದಿದ್ದ ಸಂಬಂಧಿತರಿಗೆ ತಲುಪಿಸುವ ಜವಾಬ್ದಾರಿ ಅಂಚೆ ಇಲಾಖೆಯವರದ್ದಾಗಿರುತ್ತದೆ. ಆದರೆ ಅದನ್ನು ಸಂಬಂಧಿತರಿಗೆ ತಲುಪಿಸದೆ ದಾಖಲೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆದು ಬೇಜಾಬ್ದಾರಿತನ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಪಾಣೆಮಂಗಳೂರು ಕಂದಾಯ ನಿರೀಕ್ಷಕರು ತಹಶೀಲ್ದಾರರಿಗೆ ವರದಿ ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಅಂಚೆ ಕಚೇರಿಯ ಹಿರಿಯ ಅಧಿಕಾರಿಗಳ ತಂಡ ನೇತ್ರಾವತಿ ನದಿ ತೀರ ಹಾಗೂ ಗ್ರಾ.ಪಂ.ನಲ್ಲಿ ಈ ಬಗ್ಗೆ ತನಿಖೆ ನಡೆಸಿತ್ತಾದರೂ ಸಮರ್ಪಕವಾದ ದಾಖಲೆಗಳು ಲಭ್ಯವಾಗಿರಲಿಲ್ಲೆನ್ನಲಾಗಿದೆ ಮತ್ತು ಅಧಾರ್ ಕಾಡ್೯ ಅಂಚೆ ಮೂಲಕ ತಲುಪದೆ ಇರುವ ಸಂಬಂಧಿತರಾಗಲಿ, ಗ್ರಾ.ಪಂ.ನಿಂದಾಗಲೀ ಅಂಚೆ ಇಲಾಖೆಗೆ ಯಾವುದೇ ದೂರು ಸಲ್ಲಿಕೆ ಯಾಗಿರಲಿಲ್ಲ, ನದಿಯಲ್ಲಿ ಪತ್ತೆಯಾದ ಅಧಾರ್ ಕಾಡ್೯ನ ವಿಳಾಸದಾರರ ಪೈಕಿ ಹಲವು ಮಂದಿ ಇದರ ಪ್ರತಿಯನ್ನು ಸೈಬರ್ ಮೂಲಕ ಪಡೆದುಕೊಂಡಿದ್ದಾರೆನ್ನಲಾಗಿದ್ದು, ಹಾಗಾಗಿ ಈ ಬಗ್ಗೆ ದೂರು ನೀಡಲು ಯಾರು ಆಸಕ್ತಿ ವಹಿಸಲಿಲ್ಲ ಎನ್ನಲಾಗಿದೆ.
ಇದೀಗ ನದಿಯಲ್ಲಿ ಅಧಾರ್ ಕಾಡ್೯ ಪತ್ತೆಯಾಗಿರುವುದು ಸ್ಥಳೀಯವಾಗಿ ಹತ್ತು ಹಲವು ಅನುಮಾನಗಳನ್ನು ಸೃಷ್ಟಿಸಿದೆ.