ಸ್ನಾನಕ್ಕೆ ತೆರಳಿದ್ದ ವಿದ್ಯಾರ್ಥಿ ನದಿ ನೀರಿಗೆ ಬಿದ್ದು ಸಾವು
ಬೆಳ್ತಂಗಡಿ: ನದಿಗೆ ಸ್ನಾನಕ್ಕೆ ತೆರಳಿದ ವೇಳೆ ಆಯತಪ್ಪಿ ನದಿ ನೀರಿಗೆ ಬಿದ್ದು ಕಾಲೇಜು ವಿದ್ಯಾರ್ಥಿಯೋಬ್ಬ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮುಂಡಾಜೆ- ಇಂದಬೆಟ್ಟು ಗಡಿಭಾಗದ ಅರಸಮಜಲು ಸಮೀಪ ನೇತ್ರಾವತಿ ನದಿಯ ಹೊಂಡ ಪ್ರದೇಶದಲ್ಲಿ ಸಂಬಂಧಿಕರೊಂದಿಗೆ ಸ್ನಾನಕ್ಕೆ ತೆರಳಿದ್ದ ಮುಂಡಾಜೆ ಗ್ರಾಮದ ಕುಳೂರು ನಿವಾಸಿ ನಿಶಾಂತ್(16) ಮೃತಪಟ್ಟ ದುರ್ದೈವಿ.
ಸ್ಥಳೀಯ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದ ಈತ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿ ಮನೆಯಲ್ಲೇ ಇದ್ದ ಬುಧವಾರ ಮಧ್ಯಾಹ್ನ ಸಮೀಪದ ನದಿಗೆ ಸ್ನಾನಕ್ಕೆ ತೆರಳಿದಾಗ ಅವಘಡ ಸಂಭವಿಸಿದೆ ಜತೆಗಿದ್ದವರು ರಕ್ಷಣೆಗೆ ಯತ್ನಿಸಿದರು ಸಾಧ್ಯವಾಗಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸುಮಾರು ಹತ್ತು ಅಡಿಗಿಂತ ಆಳದಲ್ಲಿ ಸಿಲುಕಿದ್ದ ಮೃತ ದೇಹವನ್ನು ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಸುಧೀರ್, ಸ್ನೇಕ್ ಪ್ರಕಾಶ್, ಸ್ನೇಕ್ ಅನಿಲ್, ನಳಿನ್ ಬೇಕಲ್, ಸಚಿನ್ ಭಿಡೆ,ಧನೇಶ್ ಧನ್ವಿ ಹಾಗೂ ಸ್ಥಳೀಯರು ಸೇರಿ ಮೇಲೆತ್ತಿದರು.
ನಿಶಾಂತ್ ನ ಪೋಷಕರು ಹಲವು ವರ್ಷಗಳ ಹಿಂದೆ ಕೇರಳದಿಂದ ಬಂದು ಮುಂಡಾಜೆ ಆಸುಪಾಸಿನಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದರು. ಈತನ ತಂದೆ ಹಾಗೂ ತಾಯಿ, ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು ಅವರಿಗೆ ಮನೆ ಇದೆ.ನಿಶಾಂತ್ ಊಟ,ತಿಂಡಿಗೆ ಸಮೀಪದ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದಿದ್ದ. ಈತನಿಗೆ ಸಹೋದರಿ ಇದ್ದು ಆಕೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.