ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನಿಸಿದ ಐವರು ಆರೋಪಿಗಳ ಬಂಧನ

ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನಿಸಿದ ಐವರು ಆರೋಪಿಗಳ ಬಂಧನ


ಕಾರ್ಕಳ: ಕಾರ್ಕಳ ಹಾಗೂ ಶಿರ್ವ ಪೊಲೀಸರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಅವರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಕ್ರಿಕೆಟ್ ಬೆಟ್ಟಿಂಗ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕುಂದಾಪುರ ನಾಡ ಗ್ರಾಮದ ಸುದರ್ಶನ್ ಶೆಟ್ಟಿ (29), ಹೇರೂರು ಗ್ರಾಮದ ಕರ್ತವ್ಯ ಶೆಟ್ಟಿ (27), ಬೈಂದೂರು ಮೂದುರು ಗ್ರಾಮದ ಅರುಣ್ ಶೆಟ್ಟಿ (29), ಹೆಬ್ರಿ ಬೆಳಂಜೆ ಗ್ರಾಮದ ತೇಜಸ್ (28), ಬೈಂದೂರು ಶೀರೂರು ಗ್ರಾಮದ ಪ್ರಜ್ವಲ್ ಶೆಟ್ಟಿ (29) ಎಂದು ಗುರುತಿಸಲಾಗಿದೆ.

ಮಾ.27ರಂದು ಮಧ್ಯಾಹ್ನ ಕಾರ್ಕಳ ಗ್ರಾಮಾಂತರ ಠಾಣೆಯ ಎಸ್ಸೈ ಪ್ರಸನ್ನ ಎಂ.ಎಸ್. ಮತ್ತು ಸಿಬ್ಬಂದಿ ಕಾರ್ಕಳ ಹಂಚಿಕಟ್ಟೆ ಹೋಂಡಾ ಶೋರೂಮ್ ಬಳಿ ಬಂಗ್ಲೆಗುಡ್ಡೆ ವೃತ್ತದಿಂದ ಬರುತ್ತಿದ್ದ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದು, ಆ ಸಂದರ್ಭದಲ್ಲಿ ಕಾರಿನಲ್ಲಿದ್ದ ಆರೋಪಿಗಳಾದ ಸುದರ್ಶನ್, ಕರ್ತವ್ಯ ಶೆಟ್ಟಿ, ಅರುಣ್, ಶ್ರೀಕಾಂತ್ ಮತ್ತು ಶಶಿಕಾಂತ್ ಎಂಬವರು ಎಸ್ಸೈ ಮತ್ತು ಸಿಬ್ಬಂದಿಗಳನ್ನು ಕೊಲ್ಲುವ ಉದ್ದೇಶದಿಂದ ಅವರ ಮೇಲೆ ಕಾರನ್ನು ಹತ್ತಿಸಲು ಪ್ರಯತ್ನಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. 

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲ್ಲಿಂದ ಮುಂದೆ ಸಾಗಿದ ಆರೋಪಿಗಳ ಕಾರು, ಬೆಳ್ಮಣ್‌ನಿಂದ ಶಿರ್ವ ಕಡೆಗೆ ಬರುತ್ತಿದ್ದು, ಶಿರ್ವ ಗ್ರಾಮದ ಪದವು ಬಳಿ ಶಿರ್ವ ಎಸ್ಸೈ ಮಂಜುನಾಥ ಮರಬದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಕಾರಿನ ಚಾಲಕ ಕಿಟಕಿಯಿಂದ ಎಸ್ಸೈಯನ್ನು ದೂಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಪರಾರಿಯಾಗಿರುವುದಾಗಿ ದೂರಲಾಗಿದೆ.

ಅದೇ ವೇಳೆ ಶಿರ್ವ ಪೇಟೆಯಲ್ಲಿದ್ದ ಪೊಲೀಸರು ಕಾರನ್ನು ತಡೆದು ನಿಲ್ಲಿಸಿ, ಆರೋಪಿಗಳನ್ನು ವಿಚಾರಿಸಿದ್ದು, ಅವರ ಹೆಸರನ್ನು ಸುದರ್ಶನ್, ಕರ್ತವ್ಯ ಶೆಟ್ಟಿ ಮತ್ತು ಅರುಣ್ ಎಂಬುದಾಗಿ ತಿಳಿಸಿದ್ದರು. ಇವರು ಶ್ರೀಕಾಂತ್,, ಶಶಿಕಾಂತ್, ಹೆಬ್ರಿಯ ತೇಜಸ್, ಬೈಂದೂರಿನ ಪ್ರಜ್ವಲ್ ಎಂಬವರೊಂದಿಗೆ ಸೇರಿ ಕ್ರಿಕೆಟ್ ಬೆಟ್ಟಿಂಗ್‌ಗೆ ಹಣ ಹೂಡಿಕೆ ಮಾಡುವಂತೆ ತಿಳಿಸಿ, ವಂಚಿಸಿ ಜನರಿಂದ ಹಣ ಪಡೆದು ಜೂಜಾಟ ನಡೆಸುತ್ತಿದ್ದರು. ಇದೇ ಉದ್ದೇಶದಿಂದ ಆರೋಪಿಗಳು ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ ಪರಾರಿಯಾಗಲು ಯತ್ನಿಸಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವು ದಾಗಿ ಶಿರ್ವ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article