12ನೇ ಮಹಡಿಯಿಂದ ಜಿಗಿದು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ
Monday, March 30, 2026
ಮಂಗಳೂರು: ವೈದ್ಯಕೀಯ ವಿದ್ಯಾರ್ಥಿಯೊಬ್ಬ ವಸತಿ ಸಮುಚ್ಛಯದ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಅತ್ತಾವರದಲ್ಲಿ ಇಂದು ನಡೆದಿದೆ.
ಉತ್ತರ ಭಾರತ ಮೂಲದ ಸಾರ್ಥಕ್ ಮೌರ್ಯ(23) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆಎಂಸಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಾರ್ಥಕ್, ಸೋಮವಾರ ಸಂಜೆ ಅತ್ತಾವರದ ಗೆಳತಿಯೊಬ್ಬಳ ಮನೆಯಿದ್ದ ವಸತಿ ಸಮುಚ್ಛಯಕ್ಕೆ ಬಂದಿದ್ದು 12ನೇ ಮಹಡಿಗೆ ತೆರಳಿ ಅಲ್ಲಿಂದ ಹೊರಕ್ಕೆ ಹಾರಿದ್ದಾನೆ. ದೇಹ ಜರ್ಝರಿತವಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸಾರ್ಥಕ್ ಅತ್ತಾವರದಲ್ಲಿ ಪಿಜಿಯೊಂದರಲ್ಲಿ ವಾಸವಿದ್ದು ಮಾ.31 ರಿಂದ ಪರೀಕ್ಷೆ ನಡೆಯಲಿಕ್ಕಿತ್ತು. ಕೃತ್ಯಕ್ಕೆ ಏನು ಕಾರಣ ಎಂದು ತಿಳಿದುಬಂದಿಲ್ಲ. ದಕ್ಷಿಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು ಕೃತ್ಯಕ್ಕೆ ಪ್ರೇಮ ವೈಫಲ್ಯವೋ ಅಥವಾ ಪರೀಕ್ಷೆ ಭಯವೋ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.