ವಿಕಸಿತ ಭಾರತದ ನಿರ್ಮಾಣಕ್ಕೆ ಅಂಗನವಾಡಿಗಳ ಬಲವರ್ಧನೆ ಮೂಲಕ ಎಳೆಯ ಮಕ್ಕಳ ಮಾನಸಿಕ ಆರೋಗ್ಯ ರಕ್ಷಣೆ ಅತ್ಯಗತ್ಯ: ಸಂಸದ ಕ್ಯಾ. ಚೌಟ
ನವದೆಹಲಿ: ಎಳೆಯ ವಯಸ್ಸಿನ ಮಕ್ಕಳಲ್ಲಿನ ಮಾನಸಿಕ ಆರೋಗ್ಯ ಮತ್ತು ಕಲಿಕಾ ಸವಾಲುಗಳನ್ನು ಪರಿಹರಿಸಲು ಅಂಗನವಾಡಿ ಹಾಗೂ ಆರಂಭಿಕ ಕಲಿಕಾ ಕೇಂದ್ರಗಳ ಸಬಲೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ನಿಯಮ 377ರಡಿ ಈ ವಿಷಯ ಪ್ರಸ್ತಾಪಿಸಿರುವ ಕ್ಯಾ.ಚೌಟ ಅವರು, ಭಾರತದಲ್ಲಿ 0-6 ವರ್ಷ ವಯಸ್ಸಿನ 16.5 ಕೋಟಿಗೂ ಹೆಚ್ಚು ಮಕ್ಕಳಿದ್ದು, ಇವರಲ್ಲಿ ಹೆಚ್ಚಿನವರು ಅಂಗನವಾಡಿ ಸೇರಿದಂತೆ ಪೂರ್ವ ಪ್ರಾಥಮಿಕ ಕಲಿಕಾ ಸಂಸ್ಥೆಗಳಿಗೆ ತೆರಳುತ್ತಿದ್ದಾರೆ. ಆದರೆ, ಈ ಹಂತದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ADHD ಮತ್ತು ಡಿಸ್ಲೆಕ್ಸಿಯಾದಂತಹ ಮಾನಸಿಕ ಸಮಸ್ಯೆ ಹಾಗೂ ಕಲಿಕಾ ನ್ಯೂನತೆಗಳನ್ನು ಗುರುತಿಸುವ ಅಥವಾ ಆ ಬಗ್ಗೆ ಸರಿಯಾದ ಜಾಗೃತಿ ಮೂಡಿಸುವ ಜತೆಗೆ ಅದಕ್ಕೆ ಸೂಕ್ತ ಪರಿಹಾರದ ಹಾಗೂ ಬೆಂಬಲದ ಕೊರತೆ ಇರುವುದು ಕಳವಳಕಾರಿ ಎಂದು ಹೇಳಿದ್ದಾರೆ.
ಎಳೆಯ ಮಕ್ಕಳಲ್ಲಿ ಕಾಡುವ ಈ ಮಾನಸಿಕ ಸಮಸ್ಯೆಗಳ ಬಗ್ಗೆ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಸಂಸದರು, ಪ್ರತಿ 7 ಮಕ್ಕಳ ಪೈಕಿ ಒಬ್ಬರು ಮಾನಸಿಕ ತೊಂದರೆ ಎದುರಿಸುತ್ತಿದ್ದು, ಈ ಪೈಕಿ ಸುಮಾರು ಶೇ. 7 ರಿಂದ 8 ರಷ್ಟು ಮಕ್ಕಳು ಪತ್ತೆ ಹಚ್ಚಬಹುದಾದ ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ಆದರೆ ಮಗುವಿನ ಶೇ. 85ರಷ್ಟು ಮೆದುಳಿನ ಬೆಳವಣಿಗೆ 6 ವರ್ಷದ ಮೊದಲೇ ಆಗುವುದರಿಂದ, ಬಾಲ್ಯದ ಆರೈಕೆ ಮತ್ತು ಶಿಕ್ಷಣ (ECCE) ಅತ್ಯಂತ ನಿರ್ಣಾಯಕ. ಮಗುವಿನ ಭಾಷೆ, ನಡವಳಿಕೆ ಹಾಗೂ ಕಲಿಕೆಗೆ ಇದೇ ಅಡಿಪಾಯ. ಈ ಹಂತದಲ್ಲಿ ನೀಡುವ ಸಕಾಲಿಕ ಬೆಂಬಲವು ಮುಂದಿನ ಗಂಭೀರ ಸವಾಲುಗಳನ್ನು ತಡೆದು, ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಮಕ್ಕಳ ಬೆಳವಣಿಗೆಯ ಹಂತದಲ್ಲೇ ಸೂಕ್ತ ಮಾರ್ಗದರ್ಶನ ನೀಡಲು ಸರ್ಕಾರದ ತರಬೇತಿ ಪಡೆದ ಆಪ್ತ ಸಮಾಲೋಚಕರನ್ನು ನೇಮಿಸಬೇಕು ಅಥವಾ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಮತ್ತು ಮುಂಚೂಣಿ ಸಿಬ್ಬಂದಿಗೆ ಈ ನಿಟ್ಟಿನಲ್ಲಿ ವಿಶೇಷ ತರಬೇತಿ ನೀಡಬೇಕು ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ.
ಈ ಸಾಮರ್ಥ್ಯ ವೃದ್ಧಿಯು ಮಕ್ಕಳ ಕಲಿಕಾ ಸವಾಲುಗಳನ್ನು ಮೊದಲೇ ಪತ್ತೆಹಚ್ಚಲು, ಮೂಲಭೂತ ಭಾವನಾತ್ಮಕ ಬೆಂಬಲ ನೀಡಲು ಹಾಗೂ ಅಗತ್ಯವಿದ್ದಲ್ಲಿ ತಜ್ಞರಿಂದ ತಪಾಸಣೆಗೆ ಒಳಪಡಿಸಲು ಸ್ಪಷ್ಟವಾದ ರೂಪುರೇಷೆ ರೂಪಿಸಲು ಅನುಕೂಲವಾಗುತ್ತದೆ. ಮಕ್ಕಳಲ್ಲಿ ಆರಂಭಿಕ ಹಂತದಲ್ಲೇ ನಾವು ಮಾನಸಿಕ ಆರೋಗ್ಯ ಮತ್ತು ಕಲಿಕೆಯ ಸವಾಲುಗಳನ್ನು ನಿರ್ಲಕ್ಷಿಸಿದರೆ, ಇಡೀ ಪೀಳಿಗೆಯು ಅದರ ಅಪಾಯ ಎದುರಿಸಬೇಕಾಗುತ್ತದೆ. ಬಾಲ್ಯದ ಮಾನಸಿಕ ಆರೋಗ್ಯ ಸಂರಕ್ಷಣಾ ವ್ಯವಸ್ಥೆಗೆ ಹೂಡಿಕೆ ಮಾಡುವುದು ಕೇವಲ ಸಾಮಾಜಿಕ ಆದ್ಯತೆಯಲ್ಲ, ಬದಲಿಗೆ ಅದು 'ವಿಕಸಿತ ಭಾರತ 2047' ಕ್ಕಾಗಿ ಬಲಿಷ್ಠ ಮತ್ತು ಸಮರ್ಥ ಮಾನವ ಸಂಪತ್ತನ್ನು ನಿರ್ಮಿಸಲು ಅದೊಂದು ಆರ್ಥಿಕ ಅಗತ್ಯವೂ ಆಗಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.
ಮಕ್ಕಳ ಮಾನಸಿಕ ಆರೋಗ್ಯ ಸಂರಕ್ಷಣೆ ಹಾಗೂ ಪೂರಕ ಬೆಳವಣಿಗೆಗೆ ಅಂಗನವಾಡಿ ಮತ್ತು ಪೂರ್ವ ಪ್ರಾಥಮಿಕ ಸಂಸ್ಥೆಗಳ ಬಲವರ್ಧನೆಯು ಅತ್ಯಗತ್ಯವಾಗಿದೆ. ಆರಂಭಿಕ ಹಂತದಲ್ಲೇ ಯಾವ ಮಗು ಕೂಡ ದೈಹಿಕ, ಮಾನಸಿಕವಾಗಿ ಹಿನ್ನಡೆ ಅನುಭವಿಸದಂತೆ ಸರ್ಕಾರವು ಬಾಲ್ಯದ ಆರೈಕೆಯಲ್ಲಿ ಮಾನಸಿಕ ಆರೋಗ್ಯದ ಅರಿವು ಮತ್ತು ಬೆಂಬಲ ವ್ಯವಸ್ಥೆಯನ್ನು ಸಂಯೋಜಿಸಬೇಕು. ಜತೆಗೆ, "ವಿಕಸಿತ ಭಾರತ 2047"ರ ಗುರಿ ಮುಟ್ಟಲು ಆರೋಗ್ಯಕರ ಹಾಗೂ ಸದೃಢ ಯುವ ಪೀಳಿಗೆಯೇ ಅತ್ಯಂತ ನಿರ್ಣಾಯಕ ಎಂದು ಅವರು ಒತ್ತಿಹೇಳಿದ್ದಾರೆ.