ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತಾ ವಾತಾವರಣ ಕಲ್ಪಿಸಬೇಕು: ನಾಗಲಕ್ಷ್ಮಿ ಚೌಧರಿ

ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತಾ ವಾತಾವರಣ ಕಲ್ಪಿಸಬೇಕು: ನಾಗಲಕ್ಷ್ಮಿ ಚೌಧರಿ


ಮಂಗಳೂರು: ಮಹಿಳೆಯರ ಮೇಲೆ  ಲೈಂಗಿಕ ದೌರ್ಜನ್ಯ ನಡೆದರೆ ಮರ್ಯಾದೆಗೆ ಅಂಜಿ ಹೆದರದೆ ಬದಲಾಗಿ ಅದನ್ನು  ಛಲದಿಂದ ಎದುರಿಸುವಂತಾಗಬೇಕು. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ 2013ರಲ್ಲಿ  ಸುಪ್ರೀಂ ಕೋರ್ಟ್ ಜಾರಿಗೆ ತಂದಿದ್ದು, ಕರ್ನಾಟಕ ರಾಜ್ಯವು  ಸುಮಾರು 80 ಸಾವಿರಕ್ಕಿಂತಲೂ ಅಧಿಕ  ಪೋಶ್ ಸಮಿತಿ ರಚಿಸಿ,  ದೇಶದಲ್ಲಿಯೇ ಮುಂಚೂಣಿಯ ಸ್ಥಾನದಲ್ಲಿದೆ ಎಂದು  ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.

ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ಮಹಿಳಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ  ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013ರ ಕುರಿತು ತರಬೇತಿ ಕಾರ್ಯಕ್ರಮ  ಶುಕ್ರವಾರ  ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಸ್ವತಂತ್ರವಾಗಿ  ಕಾರ್ಯನಿರ್ವಹಿಸಲು ಅವಕಾಶ ಸಿಗದೆ ಇರುವ ಸ್ಥಿತಿ ನಿರ್ಮಾಣವಾಗಿದ್ದು, ಮಹಿಳೆಯರು ಕೆಲಸ ನಿರ್ವಹಿಸುವ  ಸರ್ಕಾರಿ ಅಥವಾ  ಖಾಸಗಿ ಕಚೇರಿ ಅಥವಾ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿ, ಅಸಂಘಟಿತ ಸಂಸ್ಥೆಗಳಲ್ಲಿ ಲೈಂಗಿಕ ಹಿಂಸೆ, ಅಪಮಾನ, ಅಸಭ್ಯ ವರ್ತನೆ ಅಶ್ಲೀಲ ಸಂದೇಶಗಳು, ಲೈಂಗಿಕ ಕಿರುಕುಳ ಇಂತಹ ಸಮಸ್ಯೆಗಳನ್ನು ಎದುರಿಸಲು ಲೈಂಗಿಕ  ಕಿರುಕುಳ ತಡೆ ಸಮಿತಿಗೆ ದೂರು ಸಲ್ಲಿಸಬೇಕು ಎಂದು ಅವರು ಹೇಳಿದರು. 10 ಅಥವಾ ಅದಕ್ಕಿಂತ ಹೆಚ್ಚು ಮಹಿಳಾ  ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಕಡ್ಡಾಯವಾಗಿ ಆಂತರಿಕ ದೂರು ಸಮಿತಿಯನ್ನು ಹೊಂದಿರಬೇಕು. ಪ್ರತಿಯೊಂದು ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತಾ ವಾತಾವರಣ ದೊರಕಬೇಕು  ಎಂದು ಅವರು ಹೇಳಿದರು.

ಪುರುಷ ಉದ್ಯೋಗಿಗಳು  ತಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸಹ ಉದ್ಯೋಗಿಗಳೊಂದಿಗೆ ಯಾವ ರೀತಿ ವರ್ತನೆ ಮಾಡಬೇಕು ಎಂಬುದರ ಬಗ್ಗೆ ಅರಿತುಕೊಳ್ಳಬೇಕು ಎಂದರು. ಮಹಿಳೆಯರ  ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ದೂರುಗಳು ಬಂದರೆ ಸಮಿತಿಯ ಮುಖ್ಯಸ್ಥರು ನಿರ್ಲಕ್ಷ್ಯ ವಹಿಸದೆ ಕೆಲಸ ಮಾಡಿದರೆ ಶೋಷಣೆಗಳನ್ನು ತಡೆಗಟ್ಟಬಹುದು ಮತ್ತು ಮಹಿಳೆಯರಿಗೆ ಸುರಕ್ಷತೆಯನ್ನು ಒದಗಿಸಲು ಸಾಧ್ಯ. ದಕ್ಷಿಣ ಕನ್ನಡ ಜಿಲ್ಲೆ ದೌರ್ಜನ್ಯರಹಿತ ಜಿಲ್ಲೆಯಾಗಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷರು ಹೇಳಿದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ  ಮಾತನಾಡಿ, ಇಂದಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ.  ಪೋಷಕರು ಹೆಣ್ಣು ಮಕ್ಕಳಿಗೆ ಹೇಗೆ ಸಂಸ್ಕಾರಯುತವಾಗಿರಬೇಕು ಎಂಬುದನ್ನು ತಿಳಿಸುತ್ತಾರೋ ಅದೇ ರೀತಿ ಗಂಡು ಮಕ್ಕಳಿಗೂ ಅಂತಹ ಸಂಸ್ಕಾರಯುತವಾದ ಪಾಠವನ್ನು ಹೇಳಿಕೊಡಬೇಕು ಎಂದು ಅವರು ಹೇಳಿದರು.

ಕರ್ನಾಟಕ ಮಹಿಳಾ ಆಯೋಗದ  ಕಾರ್ಯದರ್ಶಿ ರೂಪಾ, ಸಹಾಯಕ ಪೋಲಿಸ್ ಆಯುಕ್ತೆ ಗೀತಾ ಕುಲಕರ್ಣಿ,  ಜಿಲ್ಲಾ ಪಂಚಾಯತ್ ಮುಖ್ಯ  ಕಾರ್ಯ ನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ  ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ ಸ್ವಾಗತಿಸಿ, ಜಿಲ್ಲಾ ನಿರೂಪಣಾಧಿಕಾರಿ  ರಶ್ಮಿ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article