ದಕ್ಷಿಣ ಕನ್ನಡ ಜಿಲ್ಲೆಗೆ ನಿರಾಶಾದಾಯಕ ಬಜೆಟ್-ಜಿಲ್ಲೆಯ ಆರೋಗ್ಯ ಕ್ಷೇತ್ರ ಕಡೆಗಣಿಸಿದ ಜನವಿರೋಧಿ ಬಜೆಟ್:  ಡಿವೈಎಫ್ಐ

ದಕ್ಷಿಣ ಕನ್ನಡ ಜಿಲ್ಲೆಗೆ ನಿರಾಶಾದಾಯಕ ಬಜೆಟ್-ಜಿಲ್ಲೆಯ ಆರೋಗ್ಯ ಕ್ಷೇತ್ರ ಕಡೆಗಣಿಸಿದ ಜನವಿರೋಧಿ ಬಜೆಟ್: ಡಿವೈಎಫ್ಐ

ಮಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡಿಸಿದ ಈ ಸಾಲಿನ (2026-27) ಆಯವ್ಯಯ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಗಳಿಗೆ ಮತ್ತು ಯುವಜನರಿಗೆ ಯಾವೊಂದು ಕೊಡುಗೆಗಳನ್ನು ನೀಡದ ಯುವಜನರ ಬದುಕಿನ ಭದ್ರತೆ ಖಾತ್ರಿಪಡಿಸದ ಅತ್ಯಂತ ನಿರಾಶಾದಾಯಕ ಮತ್ತು ಅಭಿವೃದ್ಧಿ ವಿರೋಧಿ ಬಜೆಟ್ ಹಾಗೂ ಜಿಲ್ಲೆಯ ಆರೋಗ್ಯ ಕ್ಷೇತ್ರದ ಅಭಿವೃದ್ಧಿ, ಜಯದೇವ, ಕಿದ್ವಾಯಿ ಆಸ್ಪತ್ರೆ ಸ್ಥಾಪನೆಯ ಯಾವೊಂದು ಪ್ರಸ್ತಾಪವಿರದ ಈ ಬಜೆಟ್ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಜನವಿರೋಧಿ ಬಜೆಟ್ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ದೂರಿದೆ. 

ದಕ್ಷಿಣ ಕನ್ನಡ ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂಬ ಈ ಭಾಗದ ಜನರ ಪ್ರಬಲ ಬೇಡಿಕೆಯನ್ನು ಈ ಬಾರಿಯೂ ಕಡೆಗಣಿಸಲಾಗಿದೆ. ಹಿಂದೆ ಕಾಲೇಜು ಸ್ಥಾಪನೆಯ ಘೋಷಣೆ ಮಾಡಿ ವರುಷಗಳು ಉರುಳಿದ ನಂತರ ಈ ಬಾರಿ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು 300 ಹಾಸಿಗೆಯ ಆಸ್ಪತ್ರೆ ನಿರ್ಮಿಸಲು ಅನುಮೋದನೆಯನ್ನಷ್ಟೇ ನೀಡಲಾಗಿದೆಯೇ ಹೊರತು ಮೆಡಿಕಲ್ ಕಾಲೇಜು ಸ್ಥಾಪನೆಗೆ ಬಿಡಿಗಾಸನ್ನೂ ಈ ಬಜೆಟ್ ನಲ್ಲೂ ಮೀಸಲಿಟ್ಟಿಲ್ಲ. 

ಜಿಲ್ಲೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ,  ಜಯದೇವ ಹೃದ್ರೋಗ ಆಸ್ಪತ್ರೆ ಘಟಕಗಳನ್ನು ಸ್ಥಾಪಿಸಲು ಜನಸಾಮಾನ್ಯರ ಪರವಾದ ಬೇಡಿಕೆಯನ್ನು ಪ್ರಗತಿಪರ ಸಂಘಟನೆಗಳು ಪ್ರಬಲ ಚಳುವಳಿ ರೂಪಿಸಿ ಆಗ್ರಹ ವ್ಯಕ್ತಪಡಿಸಿತ್ತು. ಈ ಕುರಿತು ಜಿಲ್ಲಾ ಉಸ್ತವಾರಿ, ಆರೋಗ್ಯ ಮಂತ್ರಿ ದಿನೇಶ್ ಗುಂಡುರಾವ್ ಮಾನ್ಯ ಮುಖ್ಯಮಂತ್ರಿಗಳ, ಸರಕಾರದ ಗಮನ ಸೆಳೆದು ಒತ್ತಾಯಿಸಿರುವ ನಂತರವೂ ಈ ಬಗ್ಗೆ ಬಜೆಟ್ ನಲ್ಲಿ ಕನಿಷ್ಟ ಘೋಷಣೆ ಮಾಡಲೂ ಸಾಧ್ಯವಾಗದಿರೋದು ರಾಜ್ಯ ಸರಕಾರ ಸಂಪೂರ್ಣ ಖಾಸಗಿ ಮೆಡಿಕಲ್ ಮಾಫಿಯಾದ ಲಾಭಿಗೆ ಶರಣಾಗಿದೆ ಎಂದು ಡಿವೈಎಫ್ಐ ಆರೋಪಿಸಿದೆ.

ಜಿಲ್ಲೆಯ 5 ತಾಲೂಕುಗಳಲ್ಲಿ ಈವರೆಗೂ ತಾಲೂಕು ಆಸ್ಪತ್ರೆಗಳಿಲ್ಲ. ಮಂಗಳೂರು, ಮುಲ್ಕಿ, ಮೂಡಬಿದರೆ, ಕಡಬ ಮತ್ತು ಉಳ್ಳಾಲ ತಾಲೂಕಿನಲ್ಲಿ ನಿಯಮಗಳ ಪ್ರಕಾರ ಬೇಕಾಗಿದ್ದ ತಾಲೂಕು ಆಸ್ಪತ್ರೆಗಳ ಸ್ಥಾಪನೆ ಕುರಿತು ಬಜೆಟ್ ನಲ್ಲಿ ಉಲ್ಲೇಖಗಳಿಲ್ಲ. ಸುರತ್ಕಲ್ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪಗಳನ್ನು ಕಡೆಗಣಿಸಿರುವ ಈ ಬಜೆಟ್ ಖಾಸಗೀ ಆಸ್ಪತ್ರೆಗಳ ಸುಲಿಗೆ ನೀತಿಗಳ ಪರವಾಗಿರುವ ಬಜೆಟಾಗಿ ತೋರಿದೆ. 

ಕೈಗಾರಿಕೆಗಳ ಸ್ಥಾಪನೆಯಲ್ಲಿ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳಾಗಲಿ ಕನಿಷ್ಟ ಇರುವ ಕೈಗಾರಿಕೆಗಳಲ್ಲಿ ಸೃಷ್ಟಿಯಾಗುವ ಉದ್ಯೋಗಳಿಗೆ ಸ್ಥಳೀಯ ಯುವಜನರಿಗೆ ಆಧ್ಯತೆ ಕಲ್ಪಿಸುವ ನೀತಿಗಳಿಲ್ಲ. ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ ಉದ್ಯೋಗಗಳ ಭರ್ತಿಗೆ ಕ್ರಮಗಳಿಲ್ಲ. ಸರಕಾರಿ ಅತಿಥಿ ಶಿಕ್ಷಕರನ್ನು, ಉಪನ್ಯಾಸಕರನ್ನು ಖಾಯಂಗೊಳಿಸುವ ಕ್ರಮಗಳಿಲ್ಲ. ಈ ಹಿಂದೆ ಪ್ರಸ್ತಾಪಿಸಿದ್ದ ಖಾಸಗೀ ವಲಯ ರಂಗದಲ್ಲೂ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ನೀತಿಗಳನ್ನು ಸಂಪೂರ್ಣ ಕೈಬಿಟ್ಟಿರುವುದು ಯುವಜನರಲ್ಲಿ ನಿರಾಶೆಯನ್ನು ಮೂಡಿಸಿದೆ. ಕನಿಷ್ಟ ಯುವಜನರ ಪರವಾದ ರಾಜ್ಯ ಯುವ ನೀತಿಗಳ ರೂಪಿಸುವ ಬಗ್ಗೆ ಯೋಜನೆಗಳೇ ಇಲ್ಲದಿರುವಂತಹ ಬಜೆಟ್ ಸಂಪೂರ್ಣ ಯುವಜನ ವಿರೋಧಿ ಬಜೆಟ್ ಎಂದು ದೂರಿದೆ.

ಒಟ್ಟು ಕರ್ನಾಟಕ ರಾಜ್ಯದ ಈ ಬಾರಿಯ ಬಜೆಟ್ ನಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಆಶಾದಾಯಕ ಯೋಜನೆಗಳಿಲ್ಲ ಸರಕಾರಿ ಆಸ್ಪತ್ರೆಗಳಿಂದ ಹಿಡಿದು ಪ್ರವಾಸೋದ್ಯಮಕ್ಕೆ ಉತ್ತೇಜನವಾಗಲಿ, ಪರಿಸರ ಸ್ನೇಹಿ ಕೈಗಾರಿಕೆಗಳನ್ನು ಸ್ಥಾಪಿಸುವ, ಇರುವ ಕೈಗಾರಿಕೆಗಳಲ್ಲಿ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಕುರಿತು ಯಾವೊಂದು ಯೋಜನೆಗಳಿರದ ಅಭಿವೃದ್ಧಿ ವಿರೋಧಿ ಮತ್ತು ಯುವಜನ ವಿರೋಧಿ ಬಜೆಟ್ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article