ಕರಾವಳಿ ಅಭಿವೃದ್ಧಿಗೆ ಪೂರಕ ಬಜೆಟ್: ಪದ್ಮರಾಜ್ ಆರ್. ಪೂಜಾರಿ

ಕರಾವಳಿ ಅಭಿವೃದ್ಧಿಗೆ ಪೂರಕ ಬಜೆಟ್: ಪದ್ಮರಾಜ್ ಆರ್. ಪೂಜಾರಿ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ. ಸುಮಾರು 4.48 ಲಕ್ಷ ಕೋಟಿ ರೂ. ಗಾತ್ರದ ಈ ಬಜೆಟ್‌ನಲ್ಲಿ ಜನಪ್ರಿಯ ಗ್ಯಾರಂಟಿ ಯೋಜನೆಗಳು ಮತ್ತು ತಾಂತ್ರಿಕ ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಗುರುತಿಸಿರುವ ಸರ್ಕಾರ, ಒಂದು ‘ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ’ಯನ್ನು ಸಿದ್ಧಪಡಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. 

ಕರಾವಳಿಯ ಆರ್ಥಿಕ ಬೆನ್ನೆಲುಬಾದ ಅಡಕೆ ಮತ್ತು ತೆಂಗು ಬೆಳೆಗಾರರು ಎದುರಿಸುತ್ತಿರುವ ಎಲೆಚುಕ್ಕಿ ಮತ್ತು ಹಳದಿಎಲೆ ರೋಗ ನಿಯಂತ್ರಣಕ್ಕೆ 10 ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ. ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ’ಸಮುದಾಯ ಆಧಾರಿತ’ ಕ್ರಮ ಕೈಗೊಳ್ಳುತ್ತಿರುವುದು ಕೇವಲ ಪರಿಹಾರ ನೀಡುವುದಷ್ಟೇ ಅಲ್ಲದೆ, ವೈಜ್ಞಾನಿಕವಾಗಿ ರೋಗ ತಡೆಗಟ್ಟಲು ಸಹಕಾರಿಯಾಗಲಿದೆ.

ಮೀನುಗಾರರ ಕಿಟ್ ಮೌಲ್ಯವನ್ನು 10,000 ರಿಂದ 20,000ಕ್ಕೆ ಹೆಚ್ಚಿಸಿರುವುದು ಸಣ್ಣ ಪ್ರಮಾಣದ ಮೀನುಗಾರರಿಗೆ ಆರ್ಥಿಕ ನೆರವು ನೀಡಲಿದೆ.

ಮಂಗಳೂರಿನಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪನೆಯು ಸಮುದ್ರ ಕೃಷಿ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಹೊಸ ಸಂಶೋಧನೆಗಳಿಗೆ ದಾರಿಯಾಲಿದೆ. ಕರಾವಳಿಯ ಮೂರು ಜಿಲ್ಲೆಗಳ ಜೊತೆಗೆ ಬಾಗಲಕೋಟೆಯಲ್ಲೂ ಮೀನು ಮಾರುಕಟ್ಟೆ ನಿರ್ಮಿಸುತ್ತಿರುವುದು ವ್ಯವಸ್ಥಿತ ಮಾರಾಟಕ್ಕೆ ವೇದಿಕೆ ಕಲ್ಪಿಸಲಿದೆ. ಪುತ್ತೂರಿನಲ್ಲಿ 300 ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದು ದಕ್ಷಿಣ ಕನ್ನಡದ ಒಳನಾಡು ಭಾಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸುಲಭವಾಗಿ ಸಿಗುವಂತೆ ಮಾಡಲಿದೆ.

ಕರಾವಳಿ ಮತ್ತು ಮಲೆನಾಡಿನ ಗ್ರಾಮೀಣ ಭಾಗದ ಶಾಲಾ ಮಕ್ಕಳು ಮತ್ತು ಜನಸಾಮಾನ್ಯರ ಮಳೆಗಾಲದ ಸಂಕಷ್ಟಕ್ಕೆ 300 ಕಾಲುಸಂಕಗಳು ದೊಡ್ಡ ಮಟ್ಟದ ಪರಿಹಾರ ನೀಡಲಿವೆ.

ಮಂಗಳೂರಿನಲ್ಲಿ ಎಸ್‌ಸಿ/ಎಸ್‌ಟಿ ಉದ್ಯೋಗಸ್ಥ ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯಗಳ ಸ್ಥಾಪನೆ ಜಿಲ್ಲೆಯ ಶೈಕ್ಷಣಿಕ ಕೇಂದ್ರವಾಗಿರುವ ಮಂಗಳೂರಿನ ಶಕ್ತಿಯನ್ನು ಹೆಚ್ಚಿಸಲಿದೆ. ಸವಿತಾ ಸಮಾಜಕ್ಕೆ ಕಡಿಮೆ ಬಡ್ಡಿದರದಲ್ಲಿ (4%) 10 ಲಕ್ಷದವರೆಗೆ ಸಾಲ ಸೌಲಭ್ಯ ನೀಡಿರುವುದು ತಳಮಟ್ಟದ ವೃತ್ತಿಪರರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆಯು ಪ್ರವಾಸೋದ್ಯಮ ಮತ್ತು ಭಕ್ತಾದಿಗಳ ಮೂಲಸೌಕರ್ಯ ನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲಿದೆ.

ದಶಕಗಳ ಬೇಡಿಕೆಯಾಗಿದ್ದ ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ ಮತ್ತು ‘ಜಾನಪದ ಸಂಗಮ’ ಆಯೋಜನೆಯು ಕರಾವಳಿಯ ವಿಶಿಷ್ಟ ಸಂಸ್ಕೃತಿಯ ಉಳಿವಿಗೆ ಸಾಕ್ಷಿಯಾಗಿದೆ. ಒಟ್ಟಾರೆಯಾಗಿ, ಈ ಬಜೆಟ್ ಕರಾವಳಿಯ ಸಾಂಪ್ರದಾಯಿಕ ಕೃಷಿ, ಆಧುನಿಕ ಮೀನುಗಾರಿಕೆ ಮತ್ತು ಸಾಂಸ್ಕೃತಿಕ ಬೇರುಗಳನ್ನು ಬೆಸೆಯುವ ಪ್ರಯತ್ನ ಮಾಡಿದೆ ಎಂದು ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article