ಉನ್ನತ ಶಿಕ್ಷಣ ನೀಡುವ ಮೂಲಕ ಸಮಾನ ಪ್ರಾತಿನಿಧ್ಯ ಕಲ್ಪಿಸಬೇಕು: ಎಚ್.ರಾಜೇಶ್ ಪ್ರಸಾದ್

ಉನ್ನತ ಶಿಕ್ಷಣ ನೀಡುವ ಮೂಲಕ ಸಮಾನ ಪ್ರಾತಿನಿಧ್ಯ ಕಲ್ಪಿಸಬೇಕು: ಎಚ್.ರಾಜೇಶ್ ಪ್ರಸಾದ್


ಮಂಗಳೂರು: ಸಮಾಜದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಬುದ್ದಿಮತ್ತೆಯನ್ನು ಹೊಂದಿದ್ದು, ಅವರಿಗೆ ಉನ್ನತ ಶಿಕ್ಷಣ, ಸೌಲಭ್ಯಗಳನ್ನು ನೀಡುವ ಮೂಲಕ ಸಮಾನ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಚಂಡಿಗಢ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಚ್.ರಾಜೇಶ್ ಪ್ರಸಾದ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಮಂಗಳೂರು ಹಾಗೂ ಮರಾಟಿ ಮಹಿಳಾ ವೇದಿಕೆ ಸಹಯೋಗದಲ್ಲಿ ಭಾನುವಾರ ಬಾಳಂ ಭಟ್ ಸಭಾಂಗಣದಲ್ಲಿ ನಡೆದ ಮರಾಟಿ ಮಹಿಳಾ ಸಂಭ್ರಮ 2026 ಉದ್ಘಾಟಿಸಿ, ಅವರು ಮಾತನಾಡಿದರು.

ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮಾಜದ  ಮಹಿಳೆಯರು ಮುಖ್ಯವಾಹಿನಿಗೆ ಬರಬೇಕಾಗಿದೆ. ವೇದಗಳ ಕಾಲದಲ್ಲಿ ಮಹಿಯರಿಗಿದ್ದ ಅಗ್ರ ಸ್ಥಾನಮಾನ ಕ್ಷೀಣಿಸುತ್ತಾ ಬಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಕಲ್ಪಿಸಿದ ಸ್ಥಾನಮಾನ ಇಂದಿಗೂ ಸಿಗದೇ ಇರುವುದು ಬೇಸರದ ಸಂಗತಿ ಎಂದರು.

ಮರಾಟಿ ಸಮುದಾಯದಲ್ಲೂ ಮಹಿಳೆಯರು ಕೆಳಸ್ತರದಲ್ಲಿದ್ದಾರೆ. ಒಟ್ಟಾರೆಯಾಗಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಸ್ಥಾನ ಪಡೆದಿದ್ದರೂ ಪ್ರಮಾಣ ಕಡಿಮೆ ಇದೆ. ಮಹಿಳೆಯರ ಸಂಘಟನೆ ಬಲಿಷ್ಠವಾಗಬೇಕು. ಪ್ರತಿ ಸಂಘಟನೆ, ಸಂಸ್ಥೆಗಳಲ್ಲಿ ಶೇ.50ರಷ್ಟು ಸ್ಥಾನಮಾನ ಸಿಗಬೇಕು. ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಶಿಕ್ಷಣ ಸೇರಿದಂತೆ ಇತರ ಹಕ್ಕುಗಳು ಸಿಗುವಂತಾಗಬೇಕು ಎಂದು ರಾಜೇಶ್ ಪ್ರಸಾದ್ ಪ್ರತಿಪಾದಿಸಿದರು.

ರಾಜ್ಯ ಮರಾಟಿ ಒಕ್ಕೂಟದ ಅಧ್ಯಕ್ಷ ಡಾ.ಕೆ.ಸುಂದರ ನಾಯ್ಕ ಮುಖ್ಯ ಅತಿಥಿಯಾಗಿದ್ದರು. ಮರಾಟಿ ಸಮಾಜ ಬಾಂಧವರು ಒಗ್ಗಟ್ಟಾಗಿ ಕೆಳ ಸ್ತರದಲ್ಲಿರುವವರನ್ನು ಮೇಲೆತ್ತಲು ಶ್ರಮಿಸಬೇಕು. ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಒಕ್ಕೂಟಕ್ಕೆ ಶಕ್ತಿ ತುಂಬಬೇಕು ಎಂದರು.

ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಂದರ ನಾಯ್ಕ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ನಿವೃತ್ತ ಮಹಾ ಪ್ರಬಂಧಕ ಕೆ.ರಾಮ ನಾಯ್ಕ, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕಿ ಡಾ.ರಶ್ಮಿ ಎಂ., ಉದ್ಯಮಿ ಶೋಭಾ ಗೋಪಾಲನ್ ಅತಿಥಿಗಳಾಗಿ ಶುಭ ಹಾರೈಸಿದರು.

ಈ ಸಂದರ್ಭ ರಾಜೇಶ್ ಪ್ರಸಾದ್, ಡಾ.ಕೆ.ಸುಂದರ ನಾಯ್ಕ, ಕೆ.ರಾಮ ನಾಯ್ಕ, ತಾಲೂಕು ಘಟಕಗಳ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ವಿಚಾರಗೋಷ್ಠಿ: 

ಮಹಿಳಾ ನಾಯಕತ್ವ-ಮಾನಸಿಕ  ಒತ್ತಡದ ನಿಭಾವಣೆ ವಿಷಯದಲ್ಲಿ ಕಾಸರಗೋಡಿನ ಮಾನಸಿಕ ತಜ್ಞೆ ಡಾ.ಜೋತ್ಸ್ನಾ, ಉದ್ಯೋಗ, ಸ್ವಸಹಾಯ ಸಂಘ-ಸುರಕ್ಷಾ ಯೋಜನೆಗಳು, ಕಾನೂನುಗಳ ಬಗ್ಗೆ ಪುತ್ತೂರಿನ ವಕೀಲ ಮಂಜುನಾಥ ನಾಯ್ಕ, ಮಹಿಳೆ-ಕುಟುಂಬ-ವೃತ್ತಿ-ಆರೋಗ್ಯ ವಿಷಯದಲ್ಲಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ತಜ್ಞೆ ಡಾ.ರಶ್ಮಿ ಎನ್. ಅವರು ಮಾಹಿತಿ ನೀಡಿದರು.

ಮರಾಟಿ ಸಮಾಜ ಸೇವಾ ಸಂಘದ ಪ್ರ.ಕಾರ್ಯದರ್ಶಿ ಸೂರ್ಯಕಾಂತ್ ನಾಯ್ಕ, ಖಜಾಂಚಿ ಕೃಷ್ಣಮೂರ್ತಿ ಡಿ., ಉಪಾಧ್ಯಕ್ಷ ವಿ.ಪಿ.ನಾಯ್ಕ, ಉಪಾಧ್ಯಕ್ಷೆ ಲೀಲಾ ಚಂದ್ರಶೇಖರ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರೇಮಾ ಮಾಧವ ನಾಯ್ಕ, ಸಂಘಟನಾ ಕಾರ್ಯದರ್ಶಿ ಪರಮೇಶ್ವರ ನಾಯ್ಕ ಎನ್., ಕಾರ್ಯಕ್ರಮ ಸಂಯೋಜಕರಾದ ರಾಜೇಶ್ವರಿ ರವಿಪ್ರಸಾದ್, ಮಹಾಲಿಂಗ ನಾಯ್ಕ ಆಸ್ಟಿನ್‌ವಾಲ್ ಮೊದಲಾದವರು ಉಪಸ್ಥಿತರಿದ್ದರು.

ಶಾಲಿನಿ ಮಹಾಲಿಂಗ ನಾಯ್ಕ ಸ್ವಾಗತಿಸಿದರು. ಮರಾಟಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದಾ ದಾಮೋದರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ವನಿತಾ ಸುಂದರ ನಾಯ್ಕ ವಂದಿಸಿದರು. ಪ್ರಕಾಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಿಳಾ ವೇದಿಕೆಯ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article