ಕಾಂತಾವರದಲ್ಲಿ ಮುದ್ದಣ ಕಾವ್ಯ, ದತ್ತಿ ಪ್ರಶಸ್ತಿ ಪ್ರದಾನ, ನಾಡಿಗೆ ನಮಸ್ಕಾರ
ಸಮಾರಂಭವನ್ನು ಉದ್ಘಾಟಿಸಿದ ಪ್ರೊ. ಟಿ.ಎಲ್ಲಪ್ಪ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾವಹಾರಿಕ, ಶೈಕ್ಷಣಿಕ ಬೆಳವಣಿಗೆಯ ಜತೆ ಸಾಹಿತ್ಯ ರಂಗದಲ್ಲಿ ಗ್ರಾಮೀಣ ನೆಲೆಯಲ್ಲಿ ಕನ್ನಡವನ್ನು ಕಟ್ಟಿಬೆಳೆಸುವುದಕ್ಕೆ ಕಾಂತಾವರ ಮಾದರಿಯಾಗಿದೆ. ಭಾಷೆ, ಜಾತಿ, ರಾಜಕೀಯ ಇನ್ನಿತರ ಮಡಿವಂತಿಕೆಯ ಹಂಗಿಲ್ಲದೇ ಮೌಲಿಕವಾಗಿ ಪ್ರಶಸ್ತಿಗಳ ಮೂಲಕ ಸಾಧಕರಿಗೆ ಮನ್ನಣೆ ನೀಡುತ್ತಿರುವ ಕನ್ನಡ ಸಂಘ ಮೌಲಿಕತೆಗೆ ನಿದರ್ಶನವಾಗಿದೆ ಎಂದರು.
ಸಹಸ್ರಾರು ವರ್ಷಗಳಿಂದ ನಾಡಿನಲ್ಲಿ ಕಾವ್ಯ ಕೃಷಿ ಸಮೃದ್ಧವಾಗಿದೆ. ಮನುಷ್ಯನ ಅಂತರಂಗದ ಕ್ಷೋಭೆಗಳು ಮತ್ತು ಹೇಳಲಾಗದ್ದನ್ನು ವ್ಯಕ್ತಪಡಿಸುವ ವೇದಿಕೆಯಾಗಿ ಕಾವ್ಯ ನೆರವಾಗುತ್ತದೆ. ಕಾಂತಾವರದಲ್ಲಿ ನಾಡು ನುಡಿ ಸೇವೆಯಲ್ಲಿ ನೀನಾಸಂ ಮಾದರಿಯಲ್ಲಿ ಕಾಂತಾವರವನ್ನು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸಿದ ಮೊಗಸಾಲೆಯವರ ಸಾಧನೆ ಶ್ಲಾಘನೀಯ ಎಂದರು.
ಪ್ರಶಸ್ತಿ ಪ್ರದಾನ: ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಲೇಖಕ, ಕವಿ ಪ್ರೊ. ಡಿ.ಎ.ಶಂಕರ್ ಅವರ ಇರುವೆಯಂತೆ ನನ್ನೊಡನೆ ಹಸ್ತಪ್ರತಿಗೆ ನಗದು ಪುರಸ್ಕಾರ ಸಹಿತ 46ನೇ ವರ್ಷದ 2025 ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ ಪ್ರಕಟಿತ ಕೃತಿಯನ್ನು ಅವರು ಬಿಡುಗಡೆ ಮಾಡಿ ಮಾತೃಭಾಷೆಯ ಜತೆಗೆ ಕನ್ನಡ ಪ್ರೀತಿ ಬೆಳೆಸುವ ಉಳಿಸುವ ಕೆಲಸ ಎಲ್ಲರಿಂದಾಗಬೇಕು. ಕನ್ನಡ ಶಾಲೆಗಳ ಅವನತಿ ಸ್ಥಿತಿ ಅಸಹನೀಯವಾಗಿದೆ ಎಂದರು.
ಸುವರ್ಣ ಸಂಭ್ರಮದಲ್ಲಿರುವ ಕಾಂತಾವರ ಕನ್ನಡ ಸಂಘದಲ್ಲಿ ಗಮಕಿ ಸತೀಶ್ ಕುಮಾರ್‌ಕೆಮ್ಮಣ್ಣು ಅವರು ಸ್ಥಾಪಿಸಿರುವ ದತ್ತಿನಿಧಿಯ 'ಗಮಕಕಲಾ ಪ್ರವಚನ' ಪ್ರಶಸ್ತಿಯನ್ನು ಮುಳಿಯ ಶಂಕರ ಭಟ್ಟ, ಗಮಕಿ ಯಾಮಿನಿ ಭಟ್ ಉಡುಪಿ ಅವರ ದತ್ತಿನಿಧಿಯ 'ಗಮಕ ಕಲಾ ವಾಚನ' ಪ್ರಶಸ್ತಿಯನ್ನು ಪದ್ಯಾಣ ಗಣಪತಿ ಭಟ್, ಕಾರ್ಕಳದ ಶಿಲ್ಪಿ ದಿ. ಕೆ.ಶಾಮರಾಯ ಆಚಾರ್ಯ ಅವರ ದತ್ತಿನಿಧಿಯ ಶಿಲ್ಪಕಲಾ ಪ್ರಶಸ್ತಿಯನ್ನು ಪಿ. ದಾಮೋದರ ಆಚಾರ್ಯ ಕಾರ್ಕಳ , ಕನ್ನಡ ಸಂಘದ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ವಾರ್ಷಿಕ ಗೌರವ ಪ್ರಶಸ್ತಿಯನ್ನು ಶಕುಂತಳಾ ಭಟ್ ಅವರಿಗೆ ನಗದು ಗೌರವ ಸಹಿತ ಪ್ರದಾನ ಮಾಡಲಾಯಿತು.
ಗೀತಾ ದೇವಾಡಿಗ, ಪ್ರೇಮಕಾಂತಿ, ಚೇತನ ಮತ್ತು ಜ್ಯೋತಿ ಸಮ್ಮಾನ ಪತ್ರ ವಾಚನದಲ್ಲಿ ಸಹಕರಿಸಿದರು.
ಡಾ. ನಾ. ಮೊಗಸಾಲೆ ಅವರ ಸಮಗ್ರ ಕಾವ್ಯದ ಅಧ್ಯಯನ ನಡೆಸಿ ಮಹಾ ಪ್ರಬಂಧ ರೂಪಿಸಿದ ಡಾ. ಚಂದ್ರ ನಾಯಕ್ ಪಿ.ಆರ್. ಅವರು ಪ್ರತಿಯನ್ನು ಕನ್ನಡ ಸಂಘಕ್ಕೆ ನೀಡಿ ಸಂಘದ ಗೌರವ ಸಮ್ಮಾನ ಸ್ವೀಕರಿಸಿದರು.
ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ಈವರೆಗಿನ ಕೃತಿ ಪ್ರಕಟಣೆಯನ್ನು 378ಕ್ಕೆ ತಲುಪುವಂತೆ ಕನ್ನಡ ವಿ.ವಿ. ಹಂಪಿ ವಿಶ್ರಾಂತ ಪ್ರಾಧ್ಯಾಪಕ ಡಾ. ಎ. ಸುಬ್ಬಣ್ಣ ರೈ ಈ ಬಾರಿ 9 ಕೃತಿಗಳ ಲೊಕಾರ್ಪಣೆಯನ್ನು ನೆರವೇರಿಸಿದರು. ಗ್ರಂಥಮಾಲೆಯ ಪ್ರಕಟಣೆ ಒಂದು ಮಾದರಿ ಸಾಧನೆಯಾಗಿದ್ದು ಕೃತಿಯಲ್ಲಿನ ಸಾಧಕರ ಬದುಕಿನ ಹಾದಿ ಇತರರಿಗೂ ಮಾರ್ಗದರ್ಶಿ ಎಂದರು.
ಗ್ರಂಥ ಮಾಲೆಯ ಸಂಪಾದಕ ಬಿ. ಜನಾರ್ಧನ ಭಟ್ ಸಕಾಲಿಕ ಮಾತುಗಳನ್ನಾಡಿದರು. ಮಾಲಿಕೆಯ ಸಾಧಕರು, ಕೃತಿಕಾರರು, ಪ್ರಾಯೋಜಕರನ್ನು ಗೌರವಿಸಲಾಯಿತು.
ಸಂಘದ ಸುವರ್ಣ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಯು.ವಿಶ್ವನಾಥ ಶೆಣೈ ಉಡುಪಿ, ಗೌರವ ಕಾರ್ಯಾಧ್ಯಕ್ಷ ಕೆ. ಶ್ರೀಪತಿ ಭಟ್ ಶುಭ ಹಾರೈಸಿದರು.
ಸಂಘದ ಜತೆ ಕಾರ್ಯದರ್ಶಿ ಸದಾನಂದ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ಡಾ. ನಾ. ಮೊಗಸಾಲೆ ಸ್ವಾಗತಿಸಿ ಉಪಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು.
