ಆಳ್ವಾಸ್ ನಲ್ಲಿ ರಾಜ್ಯಮಟ್ಟದ ಅಂತರ್‌ಕಾಲೇಜು ಫೆಸ್ಟ್ ‘ಎಂಥುಸಿಯಾ’

ಆಳ್ವಾಸ್ ನಲ್ಲಿ ರಾಜ್ಯಮಟ್ಟದ ಅಂತರ್‌ಕಾಲೇಜು ಫೆಸ್ಟ್ ‘ಎಂಥುಸಿಯಾ’

ಬಯಲು ಶಾಲೆಯ ಶಿಕ್ಷಣ ಬದುಕಿನ ನಿಜವಾದ ಕಲಿಕೆ: ಕೋಟ್ಯಾನ್


ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನ ಮ್ಯಾನಜ್ಮೇಂಟ್ ವಿಭಾಗದ ವತಿಯಿಂದ ರಾಜ್ಯಮಟ್ಟದ ಅಂತರ್‌ಕಾಲೇಜು ಫೆಸ್ಟ್ ‘ಎಂಥುಸಿಯಾ’ ಗುರುವಾರ ಸಂಸ್ಥೆಯ ಕೃಷಿಸಿರಿ ಆವರಣದ ಮೋಹಿನಿ ಅಪ್ಪಾಜಿ ನಾಯಕ್ ವೇದಿಕೆಯಲ್ಲಿ ನಡೆಯಿತು.

ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪುಸ್ತಕದ ಒಳಗಿನ ಜ್ಞಾನಕ್ಕೆ ಸೀಮಿತರಾಗದೆ ಬದುಕಿನ ಅನುಭವಗಳ ಮೂಲಕವೂ ಕಲಿಯಬೇಕು. ಪುಸ್ತಕಗಳಲ್ಲಿ ದೊರೆಯುವ ಜ್ಞಾನ ಸೀಮಿತವಾಗಿದ್ದು, ಅದರಾಚೆಯೂ ಬದುಕಿನ ಅನೇಕ ಪಾಠಗಳು ಅಡಗಿವೆ. ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಮಾತ್ರವೇ ಜೀವನದ ಸಾಧನೆ ಅಲ್ಲ, ಬಯಲು ಶಾಲೆಯ ಶಿಕ್ಷಣ ಬದುಕಿನ ನಿಜವಾದ ಕಲಿಕೆ ಎಂದರು. 


ಜೀವನದಲ್ಲಿ ವ್ಯಕ್ತಿಯೊಬ್ಬನು ಯಾವ ಎತ್ತರವನ್ನು ತಲುಪಬೇಕು ಎಂಬುದರ ಬಗ್ಗೆ ಸ್ಪಷ್ಟ ಗುರಿ ಹೊಂದಿರುವುದು ಅತ್ಯಂತ ಮುಖ್ಯ. ಗುರಿಯನ್ನು ಸಾಧಿಸುವ ಮಾರ್ಗದಲ್ಲಿ ಸ್ಪರ್ಧೆಗಳು ಪ್ರಮುಖ ಹಂತಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.

ಉದ್ಯಮಿ ರೋನಾಲ್ಡ್ ಸಿಲ್ವಾ ಡಿಸೋಜಾ ಮಾತನಾಡಿ,  ಲೈಟಿಂಗ್ ಕ್ಷೇತ್ರದಲ್ಲಿ ಇಂದು ದೇಶದಲ್ಲೇ ಮುಂಚೂಣಿಯ ಸ್ಥಾನವನ್ನು ಲೆಕ್ಸಾ ಗಳಿಸಿದೆ. ಬಹುರಾಷ್ಟ್ರೀಯ ಕಂಪನಿಗಳು ಈ ಕ್ಷೇತ್ರದಲ್ಲಿ ಅನೇಕ ಉತ್ಪನ್ನಗಳನ್ನು ತಯಾರಿಸುತ್ತಿದ್ದರೂ ಕೂಡ ಗುಣಮಟ್ಟದ ದೃಷ್ಟಿಯಿಂದ ನಮ್ಮ ಮಟ್ಟಕ್ಕೆ ತಲುಪಲು ಸಾಧ್ಯವಾಗಿಲ್ಲ  ಈ ಸಾಧನೆ ಸಾಧ್ಯವಾಗಲು ಮೂಡಬಿದಿರೆ ಪ್ರದೇಶದ ಸ್ಥಳೀಯ ಪ್ರತಿಭೆಗಳ ಸಹಕಾರವೇ ಪ್ರಮುಖ ಕಾರಣವಾಗಿದೆ. ಸ್ಥಳೀಯ ಯುವಕರ ಸಾಮರ್ಥ್ಯ, ಪರಿಶ್ರಮ ಮತ್ತು ನಿಷ್ಠೆಯೇ ಸಂಸ್ಥೆಯನ್ನು ಈ ಮಟ್ಟದ ಯಶಸ್ಸಿನತ್ತ ಕೊಂಡೊಯ್ದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ವಿದ್ಯಾರ್ಥಿಗಳು ಹೆಚ್ಚು ಅವಕಾಶಗಳನ್ನು ಬಳಸಿಕೊಂಡು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಂಡು ಸಮಾಜಕ್ಕೆ ಮತ್ತು ದೇಶಕ್ಕೆ ಕೊಡುಗೆ ನೀಡುವ ದಿಕ್ಕಿನಲ್ಲಿ ಮುಂದುವರಿಯಬೇಕು ಎಂದರು.

ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಅವಿನಾಶ್, ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್,  ಕಾರ್ಯಕ್ರಮ ಸಂಯೋಜಕರಾದ ಪ್ರವೀಣ್ ಕುಮಾರ್ ಬಿಜೆ, ಪ್ರಜ್ನಾ ಎಸ್‌ಬಿ, ನಮಿತಾ, ವಿದ್ಯಾರ್ಥಿ ಸಂಯೋಜಕರಾದ  ಜಾಹ್ನವಿ ಶೆಟ್ಟಿ, ಆಶೀಶ್ ಪೂಜಾರಿ, ಖುಷಿ  ಉಪಸ್ಥಿತರಿದ್ದರು.

 ಶ್ರೀಶ್ ಸ್ವಾಗತಿಸಿದರು. ಸಪ್ತಶ್ರೀ ಕಾಯ೯ಕ್ರಮ ನಿರೂಪಿಸಿದರು. ಭೂಮಿಕ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article