ಸಂತ ಫಿಲೊಮೆನಾ ಕಾಲೇಜಿನಲ್ಲಿ ಪೈ ದಿನಾಚರಣೆ
Wednesday, March 25, 2026
ಪುತ್ತೂರು: ಪುತ್ತೂರಿನ ಸಂತ ಫಿಲೊಮೆನಾ ಕಾಲೇಜಿ (ಸ್ವಾಯತ್ತ)ನ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗವು ಮಾ.14 ರಂದು ಗಣಿತದ ಸ್ಥಿರಾಂಕವಾದ π (ಪೈ)ಯ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ‘ಸಂಗೀತದಲ್ಲಿನ ಗಣಿತಶಾಸ್ತ್ರ’ ವಿಷಯದ ಅತಿಥಿ ಉಪನ್ಯಾಸದ ಮೂಲಕ ಪೈ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ರೇ. ಡಾ. ಆಂಟನಿ ಪ್ರಕಾಶ್ ಮೊಂಟೇರೊ ಅವರು ವಹಿಸಿ ಮಾತನಾಡಿ, ಆಲ್ಬರ್ಟ್ ಐನ್‌ಸ್ಟೈನ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿ, ಗಣಿತ ಮತ್ತು ತತ್ತ್ವಶಾಸ್ತ್ರದ ನಡುವಿನ ಸಂಬಂಧವನ್ನು ವಿವರಿಸಿ ಸಮಗ್ರ ಅಧ್ಯಯನದ ಮಹತ್ವವನ್ನು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾದ ಉಜಿರೆಯ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಪ್ರಕಾಶ್ ಪ್ರಭು ಅವರು ಪೈ ಸಂಖ್ಯೆಯ ವಿಶೇಷತೆಗಳ ಬಗ್ಗೆ ಉಪನ್ಯಾಸ ನೀಡಿದರು. ಪೈ ಒಂದು ಅನಿರ್ಣೀತ ಸಂಖ್ಯೆ ಆಗಿದ್ದು, ಅದರ ದಶಮಾಂಶಗಳು ಅಂತ್ಯವಿಲ್ಲದೆ ಮುಂದುವರಿಯುತ್ತವೆ ಎಂಬುದನ್ನು ವಿವರಿಸಿ ಗಣಿತದ ಆಟಗಳ ಮೂಲಕ ಕಾರ್ಯಕ್ರಮವನ್ನು ಆಕರ್ಷಕವಾಗಿಸಿ, ಸಂಗೀತದ ಮೂಲಕ ಗಣಿತದ ಪರಿಕಲ್ಪನೆಗಳನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಕ್ಲಾಸಿಕಲ್ ಸಂಗೀತದೊಂದಿಗೆ ಗಣಿತದ ಸಂಬಂಧವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಸಿ. ಗಣಿತ ವಿದ್ಯಾರ್ಥಿಗಳು ಹಾಗೂ ಗಣಿತಶಾಸ್ತ್ರ ವಿಭಾಗದ ಅಧ್ಯಾಪಕರು ಉಪಸ್ಥಿತರಿದ್ದರು.
