ಆಧ್ಯಾತ್ಮಿಕ ಕೇಂದ್ರಗಳ ಜೀರ್ಣೋದ್ಧಾರದಿಂದ ಊರಿನ ಸರ್ವತೋಮುಖ ಪ್ರಗತಿ: ದಿನೇಶ್ ಗಂಡೂರಾವ್

ಆಧ್ಯಾತ್ಮಿಕ ಕೇಂದ್ರಗಳ ಜೀರ್ಣೋದ್ಧಾರದಿಂದ ಊರಿನ ಸರ್ವತೋಮುಖ ಪ್ರಗತಿ: ದಿನೇಶ್ ಗಂಡೂರಾವ್

ಉಜಿರೆ: ಶ್ರೀ ಜನಾರ್ದನ ದೇವಸ್ಥಾನ ಬ್ರಹ್ಮಕಲಶೋತ್ಸವ: ವಿಜಯಗೋಪುರ ಲೋಕಾರ್ಪಣೆ


ಉಜಿರೆ: ಸರ್ವಧರ್ಮೀಯರ ಶ್ರದ್ಧಾಕೇಂದ್ರಗಳಾದ ದೇವಸ್ಥಾನಗಳು ಹಾಗೂ ಮಠ-ಮಂದಿರಗಳು ಮೊದಲಾದ ಆಧ್ಯಾತ್ಮಿಕಕೇಂದ್ರಗಳ ಜೀರ್ಣೋದ್ಧಾರದಿಂದ ಊರಿನ ಸರ್ವತೋಮುಖ ಪ್ರಗತಿಯಾಗಿ ಸುಖ-ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗಂಡೂರಾವ್ ಹೇಳಿದರು.


ಅವರು ಬುಧವಾರ ಉಜಿರೆಯಲ್ಲಿ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನೂತನ ವಿಜಯಗೋಪುರ ಲೋಕಾರ್ಪಣೆ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.


ಭಾರತದ ಭವ್ಯ ಇತಿಹಾಸ, ಧರ್ಮ, ಕಲೆ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ವಿಶ್ವಮಾನ್ಯತೆಯನ್ನು ಗಳಿಸಿದೆ. ಆಧುನಿಕತೆಯ ಪ್ರಗತಿಯೊಂದಿಗೆ ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಉತ್ತಮ ಪ್ರಗತಿಯಾಗುತ್ತಿರುವುದು ಶ್ಲಾಘನೀಯವಾಗಿದೆ ಎಂದು ಸಚಿವರು ಹೇಳಿದರು.


ನೂತನ ವಿಜಯಗೋಪುರ ಆಕರ್ಷಕವಾಗಿ ಮೂಡಿ ಬಂದಿದ್ದು ಅದನ್ನು ನೋಡಲು ಇನ್ನೊಮ್ಮೆ ತಾವು ಬರುವುದಾಗಿ ತಿಳಿಸಿದರು.


ವಿಜಯಗೋಪುರವನ್ನು ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಉಜಿರೆಗೂ, ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದ್ದು, ಧರ್ಮಸ್ಥಳದ ಕರ್ಮಕ್ಷೇತ್ರ ಉಜಿರೆಯೇ ಆಗಿದೆ. ಶಾಲಾ, ಕಾಲೇಜುಗಳು ಹಾಗೂ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಕೆ,ಜಿ.ಯಿಂದ ಪಿ.ಜಿ. ವರೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದು ಉಜಿರೆಯ ಸರ್ವತೋಮುಖ ಪ್ರಗತಿಯಾಗಿದೆ ಎಂದರು.


ಉಜಿರೆಯ ಧಣೆಗಳೆಂದೇ ಚಿರಪರಿಚಿತರಾಗಿದ್ದ ಕೀರ್ತಿಶೇಷ ವಿಜಯರಾಘವ ಪಡ್ವೆಟ್ನಾಯರ ಸ್ಮರಣಾರ್ಥ ನಿರ್ಮಿಸಿದ ವಿಜಯಗೋಪುರ ಆಕರ್ಷಕವಾಗಿ ಮೂಡಿ ಬಂದಿದೆ ಎಂದು ಹೇಳಿ ಅಭಿನಂದಿಸಿದರು.


ಆಶೀರ್ವಚನ ನೀಡಿದ ಎಡನೀರು ಮಠದ ಪೂಜ್ಯ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿ ಉಜಿರೆ ಇನ್ನಷ್ಟು ಪವಿತ್ರ ಕ್ಷೇತ್ರವಾಗಿ ಬೆಳೆಯಲಿ, ಬೆಳಗಲಿ ಎಂದು ಹಾರೈಸಿದರು.


ಶಶಿಧರ ಶೆಟ್ಟಿ ಅಧ್ಯಕ್ಷತೆ ವಹಿಸಿದರು.

ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.


ಉಜಿರೆ ಅಶೋಕ ಭಟ್ ಸಂಪಾದಕರಾಗಿ ತಯಾರಿಸಿದ ‘ವಿಜಯಪಥ’ ಮತ್ತು ಜನಾರ್ದನ ದೇವಸ್ಥಾನದ ಬಗ್ಯೆ ಸಾಂತೂರು ಶ್ರೀನಿವಾಸ ತಂತ್ರಿ ರಚಿಸಿದ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ರಾಜೇಶ್ ಪೈ ವಂದಿಸಿ, ಪ್ರೊ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article