ಕ್ಷುಲ್ಲಕ ವಿಚಾರಕ್ಕೆ ತಂಡದಿಂದ ಹಲ್ಲೆ
ಉಳ್ಳಾಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಐದು ಮಂದಿಗೆ ತಂಡವೊಂದು ಹಲ್ಲೆ ಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ಬಳಿ ನಡೆದಿದೆ.
ಹಲ್ಲೆಗೊಳಗಾದವರನ್ನು ಝಿಯಾದ್ ಇಬ್ರಾಹಿಂ, ಜುನೈದ್, ಮೊಹಮ್ಮದ್ ಇಶಾನ್, ಇಬ್ರಾಹಿಂ ಆಸ್ಕಾರ್ ಬಿ.ಸಿ.ರೋಡ್, ಮೊಹಮ್ಮದ್ ನಿಝಾಮ್ ಎಂದು ಗುರುತಿಸಲಾಗಿದೆ.
ರಿಝ್ವಾನ್ ಕೊಡಾಜೆ, ಆಫ್ರಿದ್ ಅಸೈಗೋಳಿ, ನೀಚು ಹಲ್ಲೆಗೈದ ಆರೋಪಿಗಳು ಎಂದು ತಿಳಿದುಬಂದಿದೆ.
ಘಟನೆ ವಿವರ: ಫೆ.27 ರಂದು ದೂರುದಾರ ಝಿಯಾದ್ ಇಬ್ರಾಹಿಂ ಅವರ ಸ್ನೇಹಿತ ಮೊಹಮ್ಮದ್ ಇಶಾನ್‌ಗೆ ಅಹಮ್ಮದ್ ರಾಶ್‌ನು ಬಾಕಿ ಇದ್ದ ಈ ಹಿಂದಿನ ಚಿನ್ನ ಮಾರಾಟದ ಹಣವನ್ನು ಕೊಡುವುದಾಗಿ ಹೇಳಿ ಮನೆಯ ಕಡೆಗೆ ಬರಲು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ದೂರು ದಾರ ಝಿಯಾದ್ ಇಬ್ರಾಹಿಂ, ಮೊಹಮ್ಮದ್ ಇಶಾನ್, ಇಬ್ರಾಹಿಂ ಅಸ್ತಾರ್ ಬಿಸಿರೋಡ್, ಮೊಹಮ್ಮದ್ ನಿಝಾಮ್ ಪಾಂಡೇಶ್ವರ ಕಾರಿನಲ್ಲಿ ತೆರಳಿದ್ದರು. ಈ ವೇಳೆ ಅಹಮ್ಮದ್ ರಾಶ್‌ನ ಮನೆಯ ಕಂಪೌಂಡಿನ ಹೊರಗಡೆ ಅಹಮ್ಮದ್ ರಾಶ್‌ನು ತನ್ನ ಸ್ನೇಹಿತ ರಬಿನ ಅವರಲ್ಲಿ ಹಣದ ವಿಚಾರದಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದು ಝಿಯಾದ್ ಇಬ್ರಾಹಿಂ ಅವರ ಸಹೋದರ ಜುನೈದ್ ಅದೇ ಜಾಗಕ್ಕೆ ಬಂದಿದ್ದರು.
ಇದೇ ಸಂದರ್ಭ ಶುಕ್ರವಾರ ರಾತ್ರಿ ವೇಳೆ ರಿಝ್ವಾನ್ ಕೊಡಾಜೆ, ಆಫ್ರಿದ್ ಅಸೈಗೋಳಿ, ನೀಚು ಸಹಿತ ನಾಲ್ಕು ಮಂದಿ ಒಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಇವರ ಪೈಕಿ ನೀಚು ಎಂಬಾತ ಝಿಯಾದ್ ಇಬ್ರಾಹಿಂಗೆ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಒಡ್ಡಿ ಮಾರಕಾಯುಧದಿಂದ ಹಲ್ಲೆಗೆ ಯತ್ನಿಸಿದ್ದು, ಇದೇ ವೇಳೆ ಆರೋಪಿಗಳು ಮೊಹಮ್ಮದ್ ಇಶಾನ್, ಇಬ್ರಾಹಿಂ ಆಸ್ಕಾರ್, ಮೊಹಮ್ಮದ್ ನಿಝಿಮ್‌ಗೆ ಕೈಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಆರೋಪಿ ರಿಝ್ವಾನ್ ಎಂಬಾತ ಝಿಯಾದ್ ಇಬ್ರಾಹಿಂ ಅವರ ಸಹೋದರ ಜುನೈದ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿ ಮಾರಕಾಯುಧದಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಈ ಕೃತ್ಯ ಎಸಗಿದ ಆರೋಪಿಗಳು ಅಲ್ಲಿಯೇ ನಿಲ್ಲಿಸಿದ್ದ ದೂರುದಾರ ಝಿಯಾದ್ ಇಬ್ರಾಹಿಂ ಅವರ ಸಹೋದರನ ಮಾಲಕತ್ವದ ಕಾರು, ಕಾರಿನಲ್ಲಿದ್ದ ಐಫೋನ್ ಮತ್ತು 32,000 ರೂ. ನಗದು ಹಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯಿಂದ ಗಾಯಗೊಂಡ ಜುನೈದ್ ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಬಗ್ಗೆ ಝಿಯಾದ್ ಇಬ್ರಾಹಿಂ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.