ಅಭಿವೃದ್ಧಿಗೆ ಅನುದಾನ ಇಲ್ಲ ಎನ್ನುವವರು ಗುದ್ದಲಿಪೂಜೆ ಯಾವ ಅನುದಾನದಿಂದ ಮಾಡುತ್ತಿದ್ದಾರೆ: ಐವನ್ ಡಿಸೋಜ ಪ್ರಶ್ನೆ
ಮಂಗಳೂರು: ಶಾಸಕ ವೇದವ್ಯಾಸ್ ಕಾಮತ್ ಅವರು ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸುವುದಾದರೆ ಈಗ ಶಾಸಕರು ನಡೆಸುತ್ತಿರುವ ಗುದ್ದಲಿ ಪೂಜೆ ಯಾವ ಅನುದಾನದಿಂದ ಮಾಡುತ್ತಿದ್ದಾರೆ ಎಂದು ಹೇಳಲಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದರು.
ಅವರು ಇಂದು ನಗರದ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷೀಯಲ್ಲಿ ಈ ಕುರಿತು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಯಾಗಿಲ್ಲ ಇನ್ನು ಎರಡು ವರ್ಷ ಕಳೆದು ನಮ್ಮ ಸರ್ಕಾರ ಬರುತ್ತದೆ ಆಗ ಬನ್ನಿ ಎಂದು ಅವರ ಮನೆಗೆ ಹೋದವರಿಗೆ ಹೇಳುವ ಶಾಸಕರು ಈಗ ನಡೆಸುತ್ತಿರುವ ಗುದ್ದಲಿಪೂಜೆಗೆ ಅನುದಾನ ಎಲ್ಲಿಂದ ಬಂದಿದೆ ಅದರ ಬಗ್ಗೆಯೂ ಹೇಳಬೇಕಲ್ಲ. ಬದಲಿಗೆ ಹೋದಲ್ಲೆಲ್ಲ ಸುಳ್ಳು ಹೇಳುವುದು ಸರಿಯಲ್ಲ. ನಮ್ಮಲ್ಲಿ ದಾಖಲೆಗಳಿವೆ ಅದನ್ನು ಚರ್ಚಿಸಲು ಬರಲಿ ನಾನು ಸಿದ್ದನಿದ್ದೇನೆ ಎಂದು ಸವಾಲು ಹಾಕಿದರು.
ಜನರು ಶಾಸಕರಾಗಿ ಆರಿಸಿ ಕಳಿಸಿರುವುದು ಅವರ ಮೇಲೆ ನಂಬಿಕೆಯಿಂದ, ಅವರು ಬಿಜೆಪಿಯ ಪ್ರತಿನಿಧಿಯಲ್ಲ. ಜನರ ಪ್ರತಿನಿಧಿ ಅವರು ಸಚಿವರುಗಳಲ್ಲಿಗೆ ತೆರಳಿ ಯಾವ ರೀತಿಯಲ್ಲಿ ಯಾವ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರಬೇಕು ಎಂಬುವುದನ್ನು ಯೋಚಿಸಬೇಕು, ಮಂಗಳೂರು ಅಭಿವೃದ್ಧಿಗೆ ಯೋಜನೆ ರೂಪಿಸಬೇಕಾದವರು ಇಲ್ಲಸಲ್ಲದ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಅದನ್ನು ಬಿಟ್ಟು ನಾವು ವಿಧಾನ ಪರಿಷತ್ ಸದಸ್ಯರು ಇದ್ದೇವೆ. ನಮ್ಮನ್ನು ಕರೆದುಕೊಂಡು ಸಚಿವರಲ್ಲಿಗೆ ಹೋಗಬೇಕು ಆಗ ಅನುದಾನ ಬರುತ್ತದೆ ಎಂದು ಹೇಳಿದರು.
ಆಡಳಿತ ಪಕ್ಷದಲ್ಲಿ ಇರುವವರಿಗಿಂತ ವಿರೋಧ ಪಕ್ಷದಲ್ಲಿ ಇರುವವರಿಗೆ ಹೆಚ್ಚು ಅನುದಾನ ತರುವ ಸಾಮರ್ಥ್ಯ ಇರುತ್ತದೆ. ಆದರೆ ಇವರು ಯಾರ ಬಳಿಗೆ ಹೋಗಿದ್ದಾರೆ ಎಂದು ಆಗಬೇಕೇ? ಎಂದು ಪ್ರಶ್ನಿಸಿದ ಅವರು ಮೂಡಾದಿಂದ ಗುಜ್ಜರಕೆರೆಯ ಅಭಿವೃದ್ಧಿಗೆ ಅನುದಾನ ತಂದಿದ್ದು, ಸರಿಯಾಗಿ ಕೆಲಸ ಮಾಡದೇ, ಅಲ್ಲಿಯ ನೀರು ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಯಾವುದೇ ಕೆಲಸದ ಬಗ್ಗೆ ಮಾತನಾಡುವಾಗ ನನ್ನ ಮೇಲೆ ಕೇಸು ಹಾಕಿದ್ದಾರೆ ಎಂದು ಹೇಳುವ ಶಾಸಕರು ಅದೇ ಅವರ ಅಭಿವೃದ್ಧಿ ಕೆಲಸವಾ..? ಎಂದು ಪ್ರಶ್ನಿಸಿದರು.
ಕಳೆದ ಮೂರು ವರ್ಷದಿಂದ ಮಾತ್ರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುವುದು, ಈ ಹಿಂದೆ ಕೇಂದ್ರದಲ್ಲಿ, ರಾಜ್ಯದಲ್ಲಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೂ ಇಲ್ಲಿಯ ತನಕ ಶಾಸಕ ಕಾಮತ್ ಅವರಿಗೆ ಯಾಕೆ ಒಂದು ಮನೆಯನ್ನೂ ಅವರ ಕ್ಷೇತ್ರಕ್ಕೆ ತರಲಾಗಿಲ್ಲ. ಅವರ ಸರ್ಕಾರ ಇದ್ದಾಗ ಬಿಡುಗಡೆಯಾದ ಯೋಜನೆ ಎನ್ನುವವರು ಇಲ್ಲಿಯ ತನಕ ಏಕೆ ಕಾಮಗಾರಿ ನಡೆಯಲಿಲ್ಲ ಎಂದು ಪ್ರಶ್ನಿಸಿದರು.
ಮಂಗಳೂರಿಗೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಹಂತ 2ರಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 2024-27ನೇ ಸಾಲಿಗೆ 165ಕೋಟಿ ಅನುದಾನ ಹಂಚಿಕೆಯಾಗಿದೆ. ವೆಟ್‌ವೆಲ್ ನಿರ್ಮಾಣಕ್ಕಾಗಿ ಸ್ಮಾರ್ಟ್ ಸಿಟಿಯಿಂದ 14.26ಕೋಟಿ ಠೇವಣಿ ಮೊತ್ತವನ್ನು ಪಾಲಿಕೆಗೆ ನೀಡಲಾಗಿದೆ. ನಗರದಲ್ಲಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಅಮೃತ್ ಯೋಜನೆಯಡಿ ಕೆಯುಡಿಎಫ್‌ಸಿ ವತಿಯಿಂದ 8 ಒಳಚರಂಡಿ ಕಾಮಗಾರಿ 316.49 ಕೋಟಿ ರೂ. ಅನುಷ್ಠಾನಗೊಳಿಸಲಾಗುತ್ತಿದೆ. ಈ ರೀತಿ ಅಭಿವೃದ್ಧಿ, ಮೂಲ ಸೌಕರ್ಯಗಳಿಗೆ ರಾಜ್ಯ ಸರಕಾರ ಅನುದಾನ ನೀಡುತ್ತಿದ್ದು, ವಿನಾ ಕಾರಣ ಆರೋಪ ಮಾಡಲಾಗುತ್ತಿದೆ ಎಂದರು.
ರಾಜ್ಯ ಸರಕಾರ ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಐಟಿ ಪಾರ್ಕ್‌ಗಳಿಗೆ ಈಗಾಗಲೇ ಯೋಜನೆ ರೂಪಿಸಿದೆ. ವೇದವ್ಯಾಸ್ ಕಾಮತ್ ಅವರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಹೇಳಿಕೆ ನೀಡುವ ಬದಲು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ತರಲಿ. ಜನರು ಶಾಸಕರನ್ನು ಆಯ್ಕೆ ಮಾಡಿರುವುದು ಅಭಿವೃದ್ಧಿ ಕಾರ್ಯ ಮಾಡಲು. ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಇಲ್ಲಿ ಐದು ವರ್ಷ ಜೆ.ಆರ್. ಲೋಬೊ ಅವರು ಶಾಸಕರಾಗಿದ್ದು ಬಿಟ್ರೆ ೨೫ ವರ್ಷ ಬಿಜೆಪಿಯವರೇ ಅಧಿಕಾರದಲ್ಲಿ ಇದ್ದರು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ತೋರಿಸಲಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪ್ರಮುಖರಾದ ವಿನೀಶ್ ಬಲ್ಲಾಳ್, ನಾಗೇಂದ್ರ ಕುಮಾರ್, ಹಿತೇಶ್, ಮನುರಾಜ್, ಭಾಸ್ಕರ್ ರಾವ್, ಪ್ರಕಾಶ್ ಸಾಲ್ಯಾನ್, ಅಮೃತ್ ಕದ್ರಿ ಉಪಸ್ಥಿತರಿದ್ದರು.