ಮಾದಕ ವಸ್ತು ಸೇವನೆ: ಓರ್ವನ ಬಂಧನ, ಮೂವರು ಪರಾರಿ
Wednesday, April 1, 2026
ಬಂಟ್ವಾಳ: ನರಿಕೊಂಬು ಗ್ರಾಮದ ನೆಹರೂ ನಗರಎಂಬಲ್ಲಿ ಮಾದಕ ವಸ್ತುವನ್ನು ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ತಂಡದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಸಜಿಪ ಮೂಡ ನಿವಾಸಿ ಶಾಕೀರ್ (28) ಬಂಧಿತ ಆರೋಪಿಯಾಗಿದ್ದಾನೆ.
ಸೋಮವಾರ ಸಂಜೆ ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಮೈದಾನದಲ್ಲಿ ನಿಂತಿದ್ದ ಕೆಎ19-ಎಇ 6387 ನೇ ನೋಂದಣಿಯ ಕಾರಿನಲ್ಲಿದ್ದವರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆನ್ನಲಾಗಿದೆ.
ಈ ಪೈಕಿ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಥಳದಿಂದ ಪರಾರಿಯಾದ ಅಸೀಪ್, ಸಿದ್ದಿಕ್ ಮತ್ತು ಇರ್ಷಾದ್ ಎಂಬವರು ಒಟ್ಟಿಗೆ ಮಾದಕ ವಸ್ತು ಸೇವನೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆನ್ನಲಾಗಿದೆ.
ಬಂಧಿತ ಶಾಕೀರನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಈತ ಮಾದಕವಸ್ತು ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.