‘ಸುದೀಪ್ ರೈ ಆತ್ಮಹತ್ಯೆಗೆ ಪತ್ನಿ ಕಾರಣ: ಪೋಷಕರು-ಪತ್ನಿಯಿಂದ ಆರೋಪ ನಿರಾಕರಣೆ
ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೃತ ಸುದೀಪ್ ರೈ ತಂದೆ ಬಿ. ದಾಮೋದರ ನೆಲ್ಯಾಡಿ, ‘ಮಗನ ಸಾವಿಗೆ ಮಾ. 17ರಂದು ಆತನ ಪತ್ನಿ ನೆಲ್ಯಾಡಿ ಪೇಟೆಯಲ್ಲಿ ನಡೆಸಿದ ಗಲಾಟೆಯೇ ಮುಖ್ಯ ಕಾರಣಾಗಿದೆ. ನಂತರ ಆಕೆ ಅಲ್ಲಿಂದ ನನ್ನ ಮಗ ಹಾಗೂ ಪತ್ನಿಗೆ ಜೀವ ಬೆದರಿಕೆ ಒಡ್ಡಿ ಆತನನ್ನು ಕರೆದೊಯ್ದು ಮಾನಸಿಕ ಹಿಂಸೆ ನೀಡಿದ್ದಾಳೆ. ಬಳಿಕ ಆತನ ಪರಿಸ್ಥಿತಿ ಚಿಂತಾಜನಕವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾ. ೨೯ರಂದು ಮುಂಜಾನೆ ಆತ ಮೃತಪಟ್ಟಿದ್ದಾನೆ’ ಎಂದರು.
ಸುದೀಪ್ ರೈಗೆ ಆಗಿರುವ ಮಾನಸಿಕ ಕಿರುಕುಳವನ್ನು ತಾನೂ ಸೌಮ್ಯ ಅವರಿಂದ ಅನುಭವಿಸಿದ್ದು, ಕಳೆದ ವರ್ಷ ವಿವಾಹದ ಹಂತಕ್ಕೆ ತಲುಪಿದ್ದ ನಮ್ಮ ಸಂಬಂಧ ಮುರಿದು ಬಿದ್ದಿತ್ತು. ಹಾಗಿದ್ದರೂ ಮಾನಸಿಕ ಹಿಂಸೆ ತಾಳಲಾರದೆ ತಾನು ಕೆಲ ಸಮಯ ಮುಂಬೈಗೆ ಹೋಗಿ ನೆಲೆಸುವಂತೆ ಆಗಿತ್ತು. ನಮ್ಮಿಬ್ಬರ ಸಂಬಂಧ ಮುಂದುವರಿದ್ದರೆ ಸುದೀಪ್ ರೈ ಪರಿಸ್ಥಿತಿ ತನ್ನದಾಗಿರುತ್ತಿತ್ತು. ಹಾಗಾಗಿ ಈ ಪ್ರಕರಣದ ಬಗ್ಗೆ ತನಿಖೆಯಾಗಿ ಸುದೀಪ್ ರೈಗೆ ನ್ಯಾಯ ದೊರೆಯಬೇಕು ಎಂದು ಎಂದು ವೇಣುಗೋಪಾಲ್ ಎಂಬವರು ಆಗ್ರಹಿಸಿದರು.
ಸುದೀಪ್ ರೈ ಅವರ ತಾಯಿ ಉಪಸ್ಥಿತರಿದ್ದರು.
ಆರೋಪ ನಿರಾಕರಣೆ..
ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಮೃತ ಸುದೀಪ್ ರೈ ಪತ್ನಿ ಸೌಮ್ಯ ಶೆಟ್ಟಿ, ‘ನಮ್ಮ ಮದುವೆಯನ್ನು ಸುದೀಪ್ ಮನೆಯವರು ಒಪ್ಪಿರಲಿಲ್ಲ. ಅಲ್ಲದೆ ಸುದೀಪ್ ಅವರಿಗೆ ಲಕ್ಷಾಂತರ ರೂಪಾಯಿ ಸಾಲವಿತ್ತು. ಸಾಲಗಾರರು ಫೋನ್ ಮಾಡಿದಾಗ ಅವರ ತಂದೆಯೇ ನನ್ನ ನಂಬರ್ ನೀಡುತ್ತಿದ್ದರು. ಈ ಎಲ್ಲಾ ಮಾನಸಿಕ ಒತ್ತಡಗಳಿಂದ ಸುದೀಪ್ ಆತ್ಮಹತ್ಯೆ ನಿರ್ಧಾರ ಕೈಗೊಂಡಿರಬಹುದು. ತನಗೆ ಈ ಹಿಂದೆ ಒಂದು ಮದುವೆಯಾಗಿ ವಿಚ್ಛೇದನವಾಗಿದ್ದ ವಿಷಯ ಸುದೀಪ್‌ಗೆ ತಿಳಿದಿತ್ತು ಎಂದವರು ಸ್ಪಷ್ಟಪಡಿಸಿದ್ದಾರೆ.
ಸುದೀಪ್ ಸ್ವತಹ ಫೇಸ್‌ಬುಕ್ ಮೂಲಕ ನನ್ನನ್ನು ಅಪ್ರೋಚ್ ಆಗಿದ್ದರು. ಕಳೆದ ವರ್ಷ ಫೆಬ್ರವರಿಯಿಂದ ಮೆಸೇಜ್ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ನಾನು ಅವರಿಗೆ ವಾಪಸ್ ಮೆಸೇಜ್ ಮಾಡಿದ್ದೆ. ಬಳಿಕ ಅವರು ಮದುವೆಯಾಗುವ ಇಚ್ಚೆ ವ್ಯಕ್ತಪಡಿಸಿದರು. ನನ್ನ ಮನೆಯವರಿಗೆ ಹೇಳಿ ಎಂದು ತಿಳಿಸಿದ್ದೆ. ಒಂದು ವರ್ಷದಿಂದ ನಿಮ್ಮ ಬಗ್ಗೆ ನೋಡಿ ನಾನು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಸುದೀಪ್ ಹೇಳಿದ್ದರು.ನಾನು ಸಹ ಮನೆಯವರು ಒಪ್ಪಿದರೆ ಮದುವೆಯಾಗುತ್ತೇನೆ ಎಂದು ಹೇಳಿದೆ. ಅವರು ಮನೆಯವರನ್ನು ಒಪ್ಪಿಸಿ ಮದುವೆಯ ತೀರ್ಮಾನಕ್ಕೆ ಬಂದರು. ನನ್ನ ತಮ್ಮನನ್ನು ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿ ಅವನ ಜೊತೆ ಮಾತನಾಡಿ ಮದುವೆ ತೀರ್ಮಾನಕ್ಕೆ ಬಂದರುನನ್ನ ಹಿಂದಿನ ಜೀವನದ ಬಗ್ಗೆ ಎಲ್ಲಾ ವಿಚಾರ ಅವರಿಗೆ ತಿಳಿಸಿದೆ.
ಆ ಬಗ್ಗೆ ಏನು ತಲೆಕೆಡಿಸಿಕೊಂಡಿರಲಿಲ್ಲ. ಮದುವೆ ನೋಂದಣಿಯಾದ ನಂತರ ನನ್ನ ಮನೆಯಲ್ಲಿ ಎಲ್ಲರ ಜೊತೆ ಸಂತೋಷವಾಗಿದ್ದರು. ಈಗ ಆತ್ಮಹತ್ಯೆ ಯಾಕೆ ಮಾಡಿಕೊಂಡರು ಗೊತ್ತಿಲ್ಲ. ನಮ್ಮ ಮದುವೆಗೆ ಅವರ ಮನೆಯವರು ಒಪ್ಪದಿರುವ ಕಾರಣ ಇರಬಹುದು. ಈ ಬಗ್ಗೆ ಪೊಲೀಸರು ತನಿಖೆ ಮಾಡಲಿ. ನಾನು ಕೂಡ ದೂರು ನೀಡುತ್ತೇನೆ ಎಂದಿದ್ದಾರೆ.