ವಿ.ಹಿ.ಪ., ಭಜರಂಗದಳ ಬಂಟ್ವಾಳ ಪ್ರಖಂಡದಿಂದ ಪೊಳಲಿ ‘ಅಮ್ಮನೆಡೆಗೆ ನಮ್ಮ ನಡಿಗೆ’
ಬೆಳಗ್ಗೆ 5.30ಕ್ಕೆ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರ, ಕಡೆಗೋಳಿ ಪೊಳಲಿ ದ್ವಾರ ಹಾಗೂ ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಏಕಕಾಲಕ್ಕೆ ಪಾದಯಾತ್ರೆಯು ಆರಂಭಗೊಂಡಿದ್ದು, ಸುಮಾರು 9 ಗಂಟೆಗೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ವಿ.ಹಿ.ಪ., ಭಜರಂಗದಳ ಕಾರ್ಯಕರ್ತರ ಸಹಿತ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಸಮಾಜದ ಬಂಧುಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ದೇವಳಕ್ಕಾಗಮಿಸುವ ಭಕ್ತರಿಗೆ ಹಿಂದೂ ಸಂಸ್ಕೃತಿಗೆ ಪೂರಕವಾದ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ದೇವಸ್ಥಾನದ ವಠಾರದಲ್ಲಿ ಇಲ್ಲವೇ ಯೋಗ್ಯ ಸ್ಥಳದಲ್ಲಿ ಸುಸಜ್ಜಿತವಾದ ಗೋ ಶಾಲೆಯ ನಿರ್ಮಾಣ ಮತ್ತು ನಿರ್ವಹಣೆಯನ್ನು ಮಾಡುವುದು, ಬಾಲಕ-ಬಾಲಕಿಯರಿಗೆ ಹಿಂದೂ ಸಂಪ್ರದಾಯದ ಧಾರ್ಮಿಕ ಸಂಸ್ಕಾರ ನೀಡುವ ವಿಚಾರಗಳನ್ನು ಬೋಧಿಸುವ ನಿಟ್ಟಿನಲ್ಲಿ ದೇವಸ್ಥಾನದ ವತಿಯಿಂದ ಹಿಂದೂ ಬಾಲ ಸಂಸ್ಕಾರ ಕೇಂದ್ರವನ್ನು ತೆರೆದು ಹಿಂದೂ ಧಾರ್ಮಿಕ ಶಿಕ್ಷಣವನ್ನು ನೀಡುವುದು, ದೇವಸ್ಥಾನದಲ್ಲಿ ವರ್ಷದಲ್ಲಿ ಒಂದು ಬಾರಿಯಾದರೂ ಹಿಂದೂ ಬಂಧುಗಳಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸುವುದು, ಜಾತ್ರಾ ಮಹೋತ್ಸವ, ಉತ್ಸವಾದಿಗಳ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯನುಸಾರ ಹಿಂದೂಗಳಿಗೆ ಮಾತ್ರ ವ್ಯಾಪಾರ ವ್ಯವಹಾರ ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿಕೊಡುವುದು ಮತ್ತು ಉತ್ಸವಾದಿಗಳ ಸಂದರ್ಭದಲ್ಲಿ ರಾತ್ರಿ ಭೋಜನದ ವ್ಯವಸ್ಥೆಯನ್ನು ಕಲ್ಪಿಸುವುದು ಹಾಗೂ ದೇವಳದ ವತಿಯಿಂದ ಸುವ್ಯವಸ್ಥಿತವಾದ ಭೋಜನ ಶಾಲೆ ನಿರ್ಮಿಸುವುದು, ದೇವಸ್ಥಾನದಲ್ಲಿ ಕಾಣಿಕೆ ರೂಪದಲ್ಲಿ ಹಾಗೂ ಸೇವಾ ರೂಪದಲ್ಲಿ ಸಂಗ್ರಹವಾದ ಹಣವನ್ನು ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ಧತ್ತಿ ಕಾಯ್ದೆಗನುಗುಣವಾಗಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗೆ ಅವಶ್ಯಕವಾದ ಪೂರಕ ಕ್ರಮಗಳಿಗೆ ವಿನಿಯೋಗಿಸುವಂತೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ವಿ.ಹಿ.ಪ.ನ ಬಂಟ್ವಾಳ ಪ್ರಖಂಡದ ಅಧ್ಯಕ್ಷ,ನ್ಯಾಯವಾದಿ ಪ್ರಸಾದ್ ಕುಮಾರ್ ರೈ,ಪುತ್ರೂರು ಜಿಲ್ಲಾ ವಿ.ಹಿಂ.ಪ. ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಹಾಗೂ ಹಿಂದೂ ಮುಖಂಡ ರಘು ಸಕಲೇಶಪುರ ಅವರು ವಸ್ತ್ರಸಂಹಿತೆ ಜಾರಿಗಾಗಿ ಸತತ ಏಳು ವರ್ಷದಿಂದ ಪಾದಯಾತ್ರೆಯ ಮೂಲಕ ಬಂದು ಮನವಿ ಮಾಡಿಕೊಂಡು ಬರಲಾಗುತ್ತಿದೆ. ಅದು ಕೂಡ ಇಲ್ಲಿಯವರೆಗೂ ಜಾರಿಯಾಗಿಲ್ಲ. ಹಾಗಾಗಿ ಈ ಬಾರಿಯಾದರು ಪೊಳಲಿಯಲ್ಲಿ ಹಿಂದೂ ಸಂಪ್ರದಾಯಕ್ಕೆ ಒಳಪಟ್ಟಂತೆ ವಸ್ತ್ರಸಂಹಿತೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿರುವಾಗಲೇ ವಿ.ಹಿ.ಪ., ಬಜರಂಗದಳ ಪಾದಯಾತ್ರೆಯ ಮೂಲಕ ದೇವಸ್ಥಾನಕ್ಕಾಗಮಿಸಿ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿಗಳನ್ನ ನೀಡುತ್ತಾ ಬಂದಿದೆ. ಇವುಗಳ ಪೈಕಿ ಕೆಲವು ಕಾರ್ಯರೂಪಕ್ಕೆ ಬಾರದಿದ್ದು, ಈಗಿನ ಸರ್ಕಾರವಾದರೂ ಹಿಂದೂ ಧಾರ್ಮಿಕ ಕ್ಷೇತ್ರದಲ್ಲಿ ಆಗಬೇಕಾದ ಕೆಲವೊಂದು ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ದೇವಳದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್ ಅವರು ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸುವ ಭರವಸೆಯಿತ್ತರು. ಇದೇ ವೇಳೆ ವಿ.ಹಿ.ಪ., ಭಜರಂಗದಳ ಸಂಘಟನೆಯ ವತಿಯಿಂದ ದೇವಳದ ಅವರಣದಲ್ಲಿ ವಸ್ತ್ರ ಸಂಹಿತೆಯ ಫಲಕವನ್ನು ಅಳವಡಿಸಲಾಯಿತು.
ಸಂಘಟನೆಯ ಪುತ್ತೂರು ಜಿಲ್ಲಾ ಪ್ರಮುಖರಾದ ನವೀನ್ ನೆರಿಯಾ, ಪ್ರಮೋದ್ ರೈ, ದೀಪಕ್ ಅಜೆಕಲ, ಲೋಹಿತ್ ಪಣೋಲಿಬೈಲ್, ಸಂತೋಷ್ ಸರಪಾಡಿ, ಚೆನ್ನಪ್ಪ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಕುಣಿತ ಭಜನೆ ಪಾದಯಾತ್ರೆಗೆ ಮೆರಗು ನೀಡಿತು.