ಡಾ.ಬಾಬು ಜಗಜೀವನ ರಾಂ ಅವರ 119ನೇ ಜನ್ಮದಿನಾಚರಣೆ
ಮಂಗಳೂರು: ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಿಯಾಗಿದ್ದ ಡಾ.ಬಾಬು ಜಗಜೀವನ ರಾಂ ಅವರ 119ನೇ ಜನ್ಮದಿನಾಚರಣೆ ಕಾರ್ಯಕ್ರಮ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ದ.ಕ. ಜಿಲ್ಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ರಾಜು ಕೆ., ಸಮಾಜಕ್ಕೆ ಜಗಜೀವನ್ ರಾಂ ಅವರ ಕೊಡುಗೆ ಮಹತ್ತರವಾದುದು. ಅಂದಿನ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ಅವರು ಹಸಿರು ಕ್ರಾಂತಿಯ ಮೂಲಕ ದೇಶದ ಉಜ್ವಲಕ್ಕೆ ಶ್ರಮಿಸಿದವರು. ಅವರನ್ನೂ ಈ ಸಮಾಜ ಎಂದೂ ಮರೆಯದು ಎಂದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೌಲ್ಯದಿಂದ ಪ್ರಭಾವಿತರಾಗಿದ್ದ ಬಾಬು ಜಗಜೀವನ ರಾಂ ಅವರು ಸ್ವಾತಂತ್ರ್ಯ ಹೋರಾಟದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದರು. ಸಂಸದರಾಗಿ, ದೇಶಕಂಡ ಹಸಿರು ಹರಿಕಾರರಾಗಿ ಕಠಿನ ಪರಿಸ್ಥಿತಿಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು. ಅವರ ನಡೆಸಿಕೊಟ್ಟ ದಾರಿಯಲ್ಲಿ ನಾವೆಲ್ಲಾ ನಡೆಯಬೇಕು ಎಂದು ಅವರು ಹೇಳಿದರು.
ಶಿಕ್ಷಣ ಇಲಾಖೆ ಉಪನಿರ್ದೇಶಕ ಜೆ. ಶಶಿಧರ್ ಮಾತನಾಡಿ, ಬಾಬು ಜಗಜೀವನರಾಂ ಅವರ ಸಾಧನೆ ಸದಾ ಕಾಲಕ್ಕೂ ಪ್ರೇರಣೆ ನೀಡುವಂತದ್ದು. ಯುವ ಸಮುದಾಯ ಅರನ್ನು ಆನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸೈಬರ್ ಕ್ಱೈಂ ವಿಭಾಗದ ಡಿವೈಎಸ್‌ಪಿ ಮಂಜುನಾಥ ಆರ್.ಜಿ., ಮಂಗಳೂರು ತಾಲೂಕು ತಹಶಿಲ್ದಾರ ರಮೇಶ ಬಾಬು, ಡಿಡಿಪಿಐ ರಾಜೇಶ್ವರಿ, ಸಮಾಜ ಕಲ್ಯಾಣಇಲಾಖೆ ಉಪನಿರ್ದೇಶಕ (ಪ್ರಭಾರ) ಸುರೇಶ್ ಅಡಿಗ ಉಪಸ್ಥಿತರಿದ್ದರು.
ಪುಟ್ಟಸ್ವಾಮಿ ಸ್ವಾಗತಿಸಿದರು ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.