ಲಾರಿಗೆ ಕಾರು ಢಿಕ್ಕಿ: ಓರ್ವ ಮೃತ್ಯು, ಇಬ್ಬರಿಗೆ ಗಾಯ
Friday, April 17, 2026
ಕಾಪು: ಕಾರೊಂದು ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮಣಿಪಾಲದ ವಿದ್ಯಾರ್ಥಿಯೊಬ್ಬ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಎ.17ರಂದು ನಸುಕಿನ ವೇಳೆ ಪಾಂಗಳ ವಿದ್ಯಾವರ್ಧಕ ಶಾಲೆಯ ಎದುರು ರಾ.ಹೆ.66ರಲ್ಲಿ ನಡೆದಿದೆ.
ಮೃತರನ್ನು ಮಣಿಪಾಲದ ಶ್ರೇಯಸ್ ಆಚಾರ್ಯ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಡಾರ್ವಿನ್ ಹಾಗೂ ಸೂರ್ಯ ಎಂಬವರು ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಮೂವರು ಮಣಿಪಾಲದ ವಿದ್ಯಾರ್ಥಿಗಳಾಗಿದ್ದಾರೆಂದು ತಿಳಿದುಬಂದಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು, ಅತೀವೇಗ ಹಾಗೂ ಅಜಾಗರೂಕತೆ, ನಿರ್ಲಕ್ಷತನದಿಂದ ಮಂಗಳೂರು ಬಂದರಿನಲ್ಲಿ ಕೋಕ್ ಲೋಡ್ ಮಾಡಿಕೊಂಡು ವಾಪಾಸು ಕೊಪ್ಪಳ ಜಿಲ್ಲೆಯ ಗಿಣಿಗೇರಿಗೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ಪರಿಣಾಮ ಕಾರಿನ ಮುಂದಿನ ಬಲಬದಿಯು ಸಂಪೂರ್ಣ ಜಖಂಗೊಂಡು ಕಾರು ಚಲಾಯಿಸುತ್ತಿದ್ದ ಶ್ರೇಯಸ್ ಆಚಾರ್ಯ ಸೀಟಿನಲ್ಲಿ ಸಿಲುಕಿಕೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.