ವಿನೂತನ ಶೈಲಿಯ ಚಿಕಿತ್ಸೆಯಿಂದ ಮಹಿಳಾ ಹೃದ್ರೋಗಿಗೆ ಜೀವದಾನ
ರೋಗಿಯು ದೀರ್ಘ ಕಾಲದ ತೀವ್ರ ಉಸಿರಾಟದ ಸಮಸ್ಯೆ, ತೀಕ್ಷ್ಣ ಎದೆ ನೋವು, ನಿಶಕ್ತಿ, ದಣಿವು, ದೌರ್ಬಲ್ಯ, ರಕ್ತ ಚಲನವಲನ ಸಮಸ್ಯೆಯಿಂದ ಬಳಲುತಿದ್ದು, ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಅಸಮರ್ಥಳಾಗಿದ್ದಳು. ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಮುಖ್ಯ ಹೃದ್ರೋಗ ಶಾಸ್ತ್ರ ತಜ್ಞರಾದ ಡಾ. ಹೆಚ್. ಪ್ರಭಾಕರ್‌ರವರನ್ನು ಭೇಟಿ ಮಾಡಿ ತಮ್ಮ ತೀವ್ರ ಮತ್ತು ವಿವಿಧ ಮಾರಣಾಂತಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ವೈದ್ಯರು ಸೂಕ್ಷ್ಮವಾಗಿ ರೋಗಿಯನ್ನು ಸಮಗ್ರ ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ರೋಗಿಯು ತೀವ್ರ ಹೃದ್ರೋಗಿ ಸಂಬಂಧಿ ಅಪರೂಪದ ‘ತಕಯಾಸು’ ಕಾಯಿಲೆಯಿಂದ ಬಳಲುತಿದ್ದು, ಹೃದಯದ ರಕ್ತನಾಳದಲ್ಲಿ ರಕ್ತ ಚಲನವಲನದ ಅಡ್ಡಿಯಾಗುತ್ತಿದ್ದು, ಹೃದಯದ ಕಾರ್ಯಕ್ಷಮತೆ ಕುಂಠಿತವಾಗುತ್ತಿತ್ತು. ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಮತ್ತು ಶಸ್ತ್ರ ಚಿಕಿತ್ಸೆಯ ಅಪಾಯ ಅತ್ಯಂತ ಗಂಬೀರವಾಗಿತ್ತು.
ಈ ಸಮಸ್ಯೆಯನ್ನು ಪರಿಗಣಿಸಿ ಈ ಗಂಭೀರ ಕಾಯಿಲೆ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಅರಿತು ತಕ್ಷಣ ವೈದ್ಯರು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ, ವೈದ್ಯರು ಗಂಭೀರ ಹೃದ್ರೋಗ ಜೀವಕ್ಕೆ ಅಪಾಯವಾಗುವ ಸವಾಲನ್ನು ಸ್ವೀಕರಿಸಿದರು. ಒಂದು ಪರಿಣಿತ ವೈದ್ಯರ ತಂಡವನ್ನು ನಿರ್ಮಿಸಿ, 2 ದಿನಗಳ ಅವಧಿಯ 2 ಪ್ರತ್ಯೇಕ ಹಂತದಲ್ಲಿ ವಿನೂತನ ಶೈಲಿಯ ಜೀವ ಅಪಾಯಕಾರಿ ಕ್ಲಿಷ್ಟಕರ ‘ಅಂಜಿಯೋಪ್ಲಾಸ್ಟಿ’ ಚಿಕಿತ್ಸೆಯನ್ನು ನೆರವೇರಿಸಿ ಸಾಮಾನ್ಯ ರಕ್ತ ಚಲನವಲನಕ್ಕೆ ಅನುವು ಮಾಡಿಕೊಟ್ಟರು.
ರೋಗಿಯ ತೊಡೆಯಲ್ಲಿ ಸೂಕ್ಷ್ಮ ರಂದ್ರವನ್ನು ಕೊರೆದು ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನವನ್ನು ಬಳಸಿ, ಅದರ ಮೂಲಕ ವಿಶೇಷ ಕ್ಯಾಮರಾ ಮತ್ತು ಬೆಲೂನನ್ನು ಅಳವಡಿಸಿ, ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು. ಈ ಅಪರೂಪದ ಚಿಕಿತ್ಸೆಯಲ್ಲಿ ಹೃದ್ರೋಗ ಶಾಸ್ತ್ರ ತಜ್ಞರಾದ ಡಾ. ಪ್ರದೀಪ್ ಪಿರೇರಾ, ಡಾ. ಜೋಸ್ಟಲ್ ಪಿಂಟೋ ಮತ್ತು ಡಾ. ಅಶೋಕ ಸಹಕರಿಸಿದ್ದರು. ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿ ಸಂಪೂರ್ಣವಾಗಿ ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಡುಗಡೆಗೊಂಡು ತಮ್ಮ ನಿವಾಸದಲ್ಲಿ ಸಹಜ ಆರೋಗ್ಯ ಜೀವನ ನಡೆಸುತಿದ್ದಾರೆ.
ಡಾ. ಹೆಚ್. ಪ್ರಭಾಕರ್ ಅವರು ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಈ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯಲ್ಲಿ ಉತ್ತಮ ದರ್ಜೆಯ ಚಿಕಿತ್ಸೆ ನೀಡಿದ್ದು, ಮತ್ತು ಮಾರಣಾಂತಿಕ ಸಮಸ್ಯೆಯನ್ನು ಹೊಂದಿರುವ ರೋಗಿಗೆ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸಾ ವಿಧಾನಗಳಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕ ವಂದನೀಯ ಫೋಸಿನ್ ಲೂಕಸ್ ಲೋಬೋ ಅವರು ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಅಭಿನಂದಿಸಿದ್ದಾರೆ.