ಎ.12 ರಂದು ಐತಿಹಾಸಿಕ ಮೂಡುಬಗೆ ಶ್ರೀ ಮಹಾಲಿಂಗೇಶ್ವರ ಶಿಲಾ ದೇಗುಲ ಲೋಕಾರ್ಪಣೆ: ಬ್ರಹ್ಮಕುಂಭಾಭಿಷೇಕ
ಗುರುವಾರ ದೇವಸ್ಥಾನದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅಂಪಾರು, ನಶಿಸಿಹೋಗಿದ್ದ ಈ ಪುಣ್ಯಕ್ಷೇತ್ರವನ್ನು ಕೇವಲ ಎಂಟು ತಿಂಗಳ ಅಲ್ಪಾವಧಿಯಲ್ಲಿ ಸುಮಾರು 6 ರಿಂದ 7 ಕೋಟಿ ರೂ. ವೆಚ್ಚದಲ್ಲಿ ಭವ್ಯ ಶಿಲಾಮಯ ದೇಗುಲವಾಗಿ ಪುನರ್ ನಿರ್ಮಿಸಲಾಗಿದೆ ಎಂದು ವಿವರಿಸಿದರು.
ಐತಿಹಾಸಿಕ ಹಿನ್ನೆಲೆ:
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ, ಇದು ರಾಜರ ಕಾಲದಲ್ಲಿ, ಭೂಮಿ, ರಥ ಇತ್ಯಾದಿಗಳನ್ನು ಹೊಂದಿದ ವೈಭವಯುತ ದೇವಸ್ಥಾನವಾಗಿತ್ತು. ಇಲ್ಲಿ ವಿಜೃಂಭಣೆಯ ರಥೋತ್ಸವವೂ ನಡೆಯುತ್ತಿತ್ತು. ಅಂಪಾರು, ಕೊಡ್ಲಾಡಿ, ಆಜ್ರಿ ಮೂರು ಗ್ರಾಮಗಳ ಗ್ರಾಮ ದೇವರಾದ ಮಹಾಲಿಂಗೇಶ್ವರನನ್ನು ಮೂರು ಮಾಗಣೆ ದೇವರು ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಅಳಿವಿನಂಚಿಗೆ ತಲುಪಿತ್ತು. 'ಸೇವಾಚೇತನ ಟ್ರಸ್ಟ್' ಮತ್ತು ಊರ-ಪರವೂರ ಭಕ್ತಾದಿಗಳ ಸಹಕಾರದೊಂದಿಗೆ ಇಂದು ದೇವಸ್ಥಾನವು ಜೀರ್ಣೋದ್ಧಾರಗೊಂಡಿದೆ ಎಂದು ಹೇಳಿದರು.
ಗಣ್ಯರ ಆಗಮನ:
ಏಪ್ರಿಲ್ 12ರಂದು ನಡೆಯಲಿರುವ ಬ್ರಹ್ಮಕುಂಭಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀತೀರ್ಥ ಸ್ವಾಮೀಜಿಗಳ ಅಮೃತ ಹಸ್ತದಿಂದ ನೆರವೇರಲಿವೆ. ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಸೇರಿದಂತೆ ಅನೇಕ ಸಂತ-ಮಹಾಂತರು ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಅಲ್ಲದೆ ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಅಂಪಾರು ಕೆ. ಅಶೋಕ್ ನಾಯ್ಕ್ ಮಾತನಾಡಿ, ಉತ್ಸವದ ಐದೂ ದಿನಗಳ ಕಾಲ ಭಕ್ತಾದಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆ ಇರಲಿದ್ದು, ವಿಶೇಷವಾಗಿ ಏಪ್ರಿಲ್ 10 ಮತ್ತು 12ರಂದು ಬೃಹತ್ ಮಟ್ಟದ ಅನ್ನದಾಸೋಹ ನಡೆಯಲಿದೆ.
ದೇವಸ್ಥಾನದ ಗರ್ಭಗುಡಿಯ ಒಳಗಡೆಯೇ 50 ಅಡಿ ಆಳದ ತೀರ್ಥ ಬಾವಿಯನ್ನು ನಿರ್ಮಿಸಲಾಗಿದ್ದು, ಗಟ್ಟಿಯಾದ ಶಿಲಾಪದರದ ನಡುವೆಯೂ ದೈವಸಂಕಲ್ಪದಂತೆ ದೇವರ ಅಭಿಷೇಕಕ್ಕೆ ಸಮೃದ್ಧ ಜಲ ಲಭ್ಯವಾಗಿದೆ.
ದೇವಸ್ಥಾನದ ಅಭಿವೃದ್ಧಿಗಾಗಿ ಚಂದ್ರ ಉಡುಪ ಮತ್ತು ಲಕ್ಷ್ಮೀನಾರಾಯಣ ಉಡುಪ ಕುಟುಂಬಸ್ಥರು 40 ಸೆಂಟ್ಸ್ ಜಾಗವನ್ನು ದಾನವಾಗಿ ನೀಡಿದ್ದು, ಭವ್ಯ ದೇಗುಲದ ನಿರ್ಮಾಣಕ್ಕೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಸುಮಾರು 15 ರಿಂದ 20 ಕೋಟಿ ವೆಚ್ಚದಲ್ಲಿ ರಥಬೀದಿ, ರಥ ನಿರ್ಮಾಣ ಹಾಗೂ ಪುಷ್ಕರಣಿ ಅಭಿವೃದ್ಧಿಯ ಯೋಜನೆಯನ್ನು ಸಮಿತಿ ಹೊಂದಿದೆ, ದಾನಿಗಳ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಸಮಿತಿಯ ಸದಸ್ಯ, ಪ.ಪೂ. ಕಾಲೇಜು ಪ್ರಾಶುಪಾಲ ರಂಜಿತ್ ಕುಮಾರ್ ಶೆಟ್ಟಿ ಮಹಾಲಿಂಗೇಶ್ವರನ ಕೆಲವು ಮಹಾತ್ಮೆಗಳನ್ನು ವಿವರಿಸಿ, ದೇವಾಲಯ ನಿರ್ಮಾಣಕ್ಕೆ ಹೇಗೆ ಇಂಬು ಒದಗಿಸಿತು ಎಂದು ತಿಳಿಸಿದರು.
ಮೂಡುಬಗೆಯ ಸೇವಾ ಚೇತನ ಟ್ರಸ್ಟ್ ಎರಡು ವರ್ಷಗಳ ಹಿಂದೆ ವಾರ್ಷಿಕೋತ್ಸವದ ಭಾರೀ ವಿಜೃಂಭಣೆಯ ಸಮಾರಂಭ ಹಮ್ಮಿಕೊಂಡಿದ್ದಾಗ ಇಲ್ಲಿ ಮಾತ್ರ ಭಾರೀ ಮಳೆ ಸುರಿಯಿತು. ಇದು ಮಹಾಲಿಂಗೇಶ್ವರನನ್ನು ಪೂಜಿಸದ ಪ್ರಕೋಪ ಎಂಬುದು ನಂತರ ತಿಳಿಯಿತು. ಕಳೆದ ವರ್ಷ ಮೂಡುಬಗೆ ಪ್ರದೇಶದಲ್ಲಿ ಮಾತ್ರ ಭಾರೀ ಚಂಡಮಾರುತ ಬೀಸಿ ಅಪಾರ ಹಾನಿಯಾಯಿತು. ಆದರೆ ಯಾವುದೇ ಜೀವಹಾನಿಯಾಗಿಲ್ಲ. ನಂತರ ಪ್ರಶ್ನೆಯನ್ನಿಟ್ಟಾಗ ಇದು ಕೂಡಾ ದೇವರ ಪ್ರಕೋಪ ಎಂಬುದು ತಿಳಿಯಿತು.
ಆಗಲೇ ಸೇವಾ ಚೇತನ ಟ್ರಸ್ಟ್ ದೇವಾಲಯ ಕಟ್ಟುವ ಸಂಕಲ್ಪ ತೊಟ್ಟಿತು. ಆ ಕ್ಷಣದಿಂದ ದಾನಿಗಳು, ಎಲ್ಲರ ಸಹಕಾರ ಹರಿದು ಬಂತು. ಖಾತೆಯಲ್ಲಿ ಹಣವೇ ಇಲ್ಲದಾಗಲೂ ಕಾರ್ಮಿಕರಿಗೆ ಪಾವತಿಸಲು ಅಡಚಣೆಯಾಗಲಿಲ್ಲ. ಎತ್ತರದ ಬಂಡೆಯಿಂದ ಸುತ್ತುವರಿದ ಸ್ಥಳದಲ್ಲಿ ದೇವಾಲಯವಿದ್ದರೂ ಗರ್ಭಗುಡಿಯಲ್ಲಿನ ಬಾವಿಯಲ್ಲಿ ಒಳ್ಳೆಯ ನೀರುಕ್ಕಿದೆ. ಇಂತಹ ಹಲವು ಕಾರಣಿಕಗಳು ಇಲ್ಲಿ ಸಂಭವಿಸಿ ಮಹಾಲಿಂಗೇಶ್ವರನ ಶಕ್ತಿ, ಅನುಗ್ರಹದ ಅರಿವಾಗಿದೆ ಎಂಬ ವಿವರಗಳನ್ನು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಸುಬ್ರಹ್ಮಣ್ಯ ಯಡಿಯಾಳ, ಕಾರ್ಯದರ್ಶಿ ಮನೋಹರ್ ಶೆಟ್ಟಿ ಶುಂಠಿಹಕ್ಲು, ಕೋಶಾಧಿಕಾರಿ ಕೆ. ಅಶೋಕ್ ನಾಯ್ಕ್ ಅಂಪಾರು, ಸೇವಾಚೇತನ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಹಾಗೂ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

