"ಕ್ಯೂ-ಪಿಯರ್ 2026, ರಾಷ್ಟ್ರೀಯ ಶೃಂಗಸಭೆ ಸಮಾರೋಪ
Thursday, April 16, 2026
ಕುಂದಾಪುರ: ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಯಲ್ಲಿ ನಡೆದ 'ಕ್ವಾಂಟಮ್ ಕಂಪ್ಯೂಟೇಶನ್, ಪ್ರಿಸಿಸನ್ ಇನ್ಸ್ಟ್ರುಮೆಂಟೇಶನ್ ಮತ್ತು ಎಮರ್ಜಿಂಗ್ ರಿಸರ್ಚ್ ಇನ್ಫ್ರಾಸ್ಟ್ರಕ್ಚರ್' ವಿಷಯದ ಕುರಿತಾದ ರಾಷ್ಟ್ರೀಯ ಶೃಂಗಸಭೆಯ ಸಮಾರೋಪ ಸಮಾರಂಭ ನೆರವೇರಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕ್ವಾಂಟಮ್ ನಂತಹ ಆಧುನಿಕ ವಿಷಯ ಗಳೊಂದಿಗೆ ಕೃಷಿ, ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ. ಇದು ಕೃಷಿ ಸಮಸ್ಯೆಗಳ ಸುಧಾರಣೆ ಹಾಗೂ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಹಕಾರಿಯಾಗುತ್ತದೆ ಎಂದು ಖಾದರ್ ತಿಳಿಸಿದರು. ಇಂತಹ ಸಂಶೋಧನಾ ಕೇಂದ್ರಗಳಿಗೆ ಸರ್ಕಾರದಿಂದ ಸಬ್ಸಿಡಿ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೊಂದಿಗೆ ಚರ್ಚಿಸುವುದಾಗಿ ಅವರು ಭರವಸೆ ನೀಡಿದರು.
ಮೆಟ್ರೋ ನಗರಗಳಲ್ಲಿ ಮಾತ್ರ ಕಾಣಸಿಗುವ 'ಕ್ವಾಂಟಮ್ ಕಂಪ್ಯೂಟರ್ ಸಂಶೋಧನಾ ಕೇಂದ್ರ' ಇಂದು ಮೂಡ್ಲಕಟ್ಟೆಯಂತಹ ಗ್ರಾಮೀಣ ಭಾಗದಲ್ಲಿ ಆರಂಭಗೊಂಡಿರುವುದು ಶ್ಲಾಘನೀಯ ಎಂದು ಪ್ರಮುಖ ಸಂಶೋಧಕ ಪ್ರೊ. ಸಪ್ತರ್ಷಿ ಚೌಧರಿ ಅಭಿಪ್ರಾಯಪಟ್ಟರು.
ಐಎಂಜೆ ಸಂಸ್ಥೆಯ ಅಧ್ಯಕ್ಷ ಸಿದ್ದಾರ್ಥ್ ಜೆ. ಶೆಟ್ಟಿ ಅಧ್ಯಕ್ಷೀಯ ಭಾಷಣದಲ್ಲಿ ಶುಭ ಹಾರೈಸಿದರು.
ವಿಇಸಿಸಿ ಕೊಲ್ಕತ್ತಾ ಇದರ ವೈಜ್ಞಾನಿಕ ಅಧಿಕಾರಿಯಾಗಿರುವ ಡಾ. ಪರ್ಣಿಕಾ ದಾಸ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಐ ಎಮ್ ಜೆ ಐ ಆರ್ ನಿರ್ದೇಶಕ ಡಾ. ಸತ್ಯಜಿತ್ ಎರಡುದಿನಗಳ ವರದಿ ನೀಡಿದರು, ಐ ಎಂ ಜೆ ಸಂಸ್ಥೆಯ ಅಕಾಡಮಿಕ್ ನಿರ್ದೇಶಕ ಡಾ. ಎಸ್. ಎನ್.ಭಟ್ ಸ್ವಾಗತಿಸಿದರು . ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ಡೈರೆಕ್ಟರ್ ಆಗಿರುವ ಡಾ. ರಾಮಕೃಷ್ಣ ಹೆಗಡೆ ವಂದಿಸಿದರು. ಪ್ರಾಧ್ಯಾಪಕಿ ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.