ಮರವಂತೆ: ಗ್ಯಾಸ್ ಟ್ಯಾಂಕರ್, ಲಾರಿ ಹಾಗೂ ಕಾಲೇಜು ಬಸ್ ನಡುವೆ ಭೀಕರ ರಸ್ತೆ ಅಪಘಾತ
ಶಿವಮೊಗ್ಗದ ಶಂಕರಘಟ್ಟ ರಂಭಾಪುರಿ ಕಾಲೇಜಿನ ಪ್ರವಾಸಿ ಬಸ್, ಗ್ಯಾಸ್ ಟ್ಯಾಂಕರ್ ಹಾಗೂ ಲಾರಿಗಳ ನಡುವೆ ಈ ಭೀಕರ ಸರಣಿ ಅಪಘಾತ ನಡೆದಿದ್ದು, ಬಸ್ ನಲ್ಲಿದ್ದ 20ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ರಂಭಾಪುರಿ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಕೇರಳ ನೋಂದಣಿಯ ಖಾಸಗಿ ಬಸ್ಸಿನಲ್ಲಿ ಹೊರಟಿದ್ದರು. ಬಸ್ಸಿನಲ್ಲಿ 24 ವಿದ್ಯಾರ್ಥಿಗಳು ಹಾಗೂ 23 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 50 ಮಂದಿ ಇದ್ದರು. ಮುರ್ಡೇಶ್ವರ ಪ್ರವಾಸ ಮುಗಿಸಿ ಬುಧವಾರ ಬೆಳಿಗ್ಗೆ ಉಡುಪಿಯ ದೇವಸ್ಥಾನಗಳ ದರ್ಶನಕ್ಕೆಂದು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ವಾಹನದ ಮೇಲಿನ ನಿಯಂತ್ರಣ ತಪ್ಪಿದ್ದೇ ದುರ್ಘಟನೆಗೆ ಕಾರಣ:
ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ, ಮರವಂತೆ ಕಡಲತೀರದ ಸೌಂದರ್ಯವನ್ನು ವೀಕ್ಷಿಸುತ್ತಾ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್, ವೇಗವಾಗಿ ಹೋಗಿ ಮೊದಲು ಮಹಾರಾಷ್ಟ್ರ ಮೂಲದ ಗ್ಯಾಸ್ ಟ್ಯಾಂಕರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬಸ್ ಮುಂದೆ ಚಲಿಸಿ ರಸ್ತೆ ಬದಿಯಲ್ಲಿ ನಿಂತಿದ್ದ ತಮಿಳುನಾಡು ಮೂಲದ ಗೂಡ್ಸ್ ಲಾರಿಗೂ ಹಿಂಬದಿಯಿಂದ ಅಪ್ಪಳಿಸಿದೆ. ಅಪಘಾತದ ಭೀಕರತೆಗೆ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಗ್ಯಾಸ್ ಟ್ಯಾಂಕರ್ ಕೂಡ ಜಖಂಗೊಂಡಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಭೀತಿ ಇದೆ.
ರಕ್ಷಣಾ ಕಾರ್ಯಾಚರಣೆ:
ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಆಪದ್ಬಾಂಧವ ಅಂಬ್ಯುಲೆನ್ಸ್‌ನ ಇಬ್ರಾಹಿಂ ಗಂಗೊಳ್ಳಿ ಮತ್ತು ಅವರ ತಂಡ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ಕೈಗೊಂಡಿತು. ಬಸ್ಸಿನ ಅವಶೇಷಗಳ ನಡುವೆ ಸಿಲುಕಿದ್ದ ಮೃತದೇಹಗಳನ್ನು ಹಾಗೂ ಗಂಭೀರವಾಗಿ ಗಾಯಗೊಂಡಿದ್ದ ಆರು ಮಂದಿ ಸೇರಿದಂತೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯಿತು.
ವಿಷಯ ತಿಳಿದ ಕೂಡಲೇ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಡಿವೈಎಸ್ಪಿ ಕುಲಕರ್ಣಿ, ಗಂಗೊಳ್ಳಿ ಎಸೈ ಪವನ್ ನಾಯಕ್ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ದೌಡಾಯಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು.
ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.