ಮಂಗಳೂರು ಮನಪಾ: ಮೇ 1ರಿಂದ ನೀರು ಪೂರೈಕೆಯಲ್ಲಿ ರೇಶನಿಂಗ್: ದರ್ಶನ್ ಎಚ್.ವಿ.

ಮಂಗಳೂರು ಮನಪಾ: ಮೇ 1ರಿಂದ ನೀರು ಪೂರೈಕೆಯಲ್ಲಿ ರೇಶನಿಂಗ್: ದರ್ಶನ್ ಎಚ್.ವಿ.

ಮಂಗಳೂರು: ತುಂಬೆ ಕಿಂಡಿ ಅಣೆಕಟ್ಟು ಹಾಗೂ ಎಎಂಆರ್ ಸೇರಿದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಜೂನ್ 10ರವರೆಗೂ ನೀರು ಪೂರೈಕೆಗೆ ಸಾಕಾಗುವಷ್ಟು ನೀರಿನ ಸಂಗ್ರಹವಿದೆ. ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸುರತ್ಕಲ್ ಮೊದಲಾದ ಪ್ರದೇಶಗಳಿಗೂ ಸೂಕ್ತ ನೀರು ಪೂರೈಕೆಯ ದೃಷ್ಟಿಯಿಂದ ಮೇ 1ರಿಂದ ರೇಶನಿಂಗ್ ಗೆ ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಮನಪಾ ಆಡಳಿತಾಧಿಕಾರಿಯೂ ಆಗಿರುವ ದರ್ಶನ್ ಎಚ್.ವಿ. ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಕಚೇರಿಲ್ಲಿ ಶುಕ್ರವಾರ ಫೋನ್ ಇನ್ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. 

ತುಂಬೆಯಿಂದ ಪ್ರಸಕ್ತ 160 ಎಂಎಲ್ಡಿ ನೀರು ಪಂಪಿಂಗ್ ನಡೆಯುತ್ತಿದ್ದು, ಅದರಂತೆಯೇ ನೀರು ಪಂಪಿಂಗ್ ಪ್ರತಿನಿತ್ಯ ಮುಂದುವರಿಯಲಿದೆ. ಆದರೆ ಪೂರೈಕೆಯಲ್ಲಿ ಕೆಲವೊಂದು ಗಂಟೆಗಳ ಕಾಲ ಕೆಲವೊಂದು ಪ್ರದೇಶಗಳಿಗೆ ಸೀಮಿತವಾಗಿ ನೀರು ಪೂರೈಕೆಯಾಗಲಿದೆ. ಇದರಿಂದ ಕನಿಷ್ಠ ಎರಡು ದಿನಗಳಿಗೊಮ್ಮೆ ಪಾಲಿಕೆಯ 60 ವಾರ್ಡ್ ಗಳಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಎ.24ಕ್ಕೆ ತುಂಬೆ ಅಣೆಕಟ್ಟಿನಲ್ಲಿ 4.53 ಮೀಟರ್ ಹಾಗೂ ಎಎಂಆರ್ ಡ್ಯಾಂನಲ್ಲಿ 18.53 ಮೀಟರ್ ನೀರಿದೆ. ಈವರೆಗೂ ಎಎಂಆರ್ ಡ್ಯಾಂನಿಂದ ನೀರನ್ನು ತುಂಬೆಗೆ ಹರಿಸಿಲ್ಲ. ನಗರ ಮಾತ್ರವಲ್ಲದೆ, ಪಶ್ಚಿಮ ಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಅಣೆಕಟ್ಟುಗಳಿಗೆ ಒಳಹರಿವು ಇದೆ ಎಂದು ಅವರು ಹೇಳಿದರು.

ನಗರಕ್ಕೆ ಪೂರೈಕೆಯಾಗುವ ನೀರಿನ ಸಂಪರ್ಕದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಅಲ್ಲಲ್ಲಿ ಅಕ್ರಮ ಸಂಪರ್ಕ ಪಡೆದಿರುವ ವಿಚಾರದಲ್ಲಿ ಈಗಾಗಲೇ ಸಭೆ ನಡೆದಿದೆ. ಸುಮಾರು 40ಕ್ಕೂ ಅಧಿಕ ಕಡೆಗಳಲ್ಲಿ ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚಲಾಗಿದ್ದು, ಇನ್ನೂ ಹಲವೆಡೆ ಹೊಸ ಅಕ್ರಮ ಸಂಪರ್ಕಗಳನ್ನು ಪಡೆದಿರುವ ಆಕ್ಷೇಪಗಳಿದ್ದು, ಅವುಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಮಾನವೀಯ ದೃಷ್ಟಿಯಿಂದ ಸದ್ಯ ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿಲ್ಲ. ಮುಂದೆ ಮೀಟರ್ ಅಳವಡಿಸಿ ಗ್ರಾಮಗಳಿಗೆ ನೀರು ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಅನಧಿಕೃತ ಫ್ಲೆಕ್ಸ್ ಅಳವಡಿಕೆ ಸಮಸ್ಯೆಯಾಗಿದ್ದು, ಈ ನಡುವೆ ಡಿವೈಡರ್ಗಳಲ್ಲಿಯೂ ಫ್ಲೆಕ್ಸ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಯಾವುದೇ ರೀತಿಯಲ್ಲಿ ಆಸ್ಪದ ನೀಡುವಂತಿಲ್ಲ. ಸರಕಾರಿ ಕಾರ್ಯಕ್ರಮಗಳ ಫ್ಲೆಕ್ಸ್ಗಳನ್ನು ಕೂಡಾ ಈ ರೀತಿಯಾಗಿ ಅಳವಡಿಸುವಂತಿಲ್ಲ. ಈ ಬಗ್ಗೆ ಎಂಎಲ್‌ಎ, ಎಂಎಲ್ ಸಿಯವರಿಗೂ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಫ್ಲೆಕ್ಸ್ ಅಳವಡಿಸುವ ವಿರುದ್ಧ ಶೂನ್ಯ ಸಹಿಷ್ಣುತೆಯೊಂದಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಗರದಲ್ಲಿ ಪ್ರಸಕ್ತ ನಡೆಯುತ್ತಿರುವ ಜಲಸಿರಿ ಯೋಜನೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಅದಾಗ್ಯೂ ಮಳೆಗಾಲದ ಹಿನ್ನೆಲೆಯಲ್ಲಿ ಈಗಾಗಲೇ ಕಾಮಗಾರಿಗಾಗಿ ಅಗೆತ ಮಾಡಿರುವಲ್ಲಿ ಮೇ 20ರೊಳಗೆ ಮುಚ್ಚುವ ಕಾರ್ಯ ನಡೆಸುವಂತೆ ಸಚನೆ ನೀಡಲಾಗಿದೆ. ಸೋಮವಾರ ಮತ್ತೆ ಈ ಬಗ್ಗೆ ಸಭೆ ನಡೆಯಲಿದೆ. ಮಳೆಗಾಲದಲ್ಲಿ ಯಾವುದೇ ಅಗೆತಕ್ಕೆ ಅವಕಾಶವಿಲ್ಲ. ಹಾಗೂ ಅಗೆದಿರುವುದನ್ನು ಸಂಪೂರ್ಣವಾಗಿ ಮುಚ್ಚಲು ಕ್ರಮ ವಹಿಸಲು ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದರು.

ಆಸಕ್ತ ಸ್ಥಳೀಯರಿಂದ ಹೂಳೆತ್ತುವ ಕಾಮಗಾರಿಯ ನಿಗಾ:

ನಗರ ಪಾಲಿಕೆ ವ್ಯಾಪ್ತಿಯ ರಾಜಕಾಲುವೆ, ಮಳೆ ನೀರು ಹರಿಯುವ ಚರಂಡಿಗ ಹೂಳೆತ್ತುವ ಕಾಮಗಾರಿಯನ್ನು ಸುಮಾರು 4 ಕೋಟಿ ರೂ. ವೆಚ್ಚದಲ್ಲಿ 32 ಪ್ಯಾಕೇಜ್ಗಳ ಟೆಂಡರ್ ಕರೆಯಲಾಗಿದೆ. ಈಗಾಗಲೇ 27 ಪ್ಯಾಕೇಜ್ ಕಾಮಗಾರಿ ಆರಂಭವಾಗಿದ್ದು, ಉಳಿದ ಪ್ಯಾಕೇಜ್ ಇನ್ನೊಂದು ವಾರದಲ್ಲಿ ಆರಂಭಗೊಳ್ಳಲಿದೆ. ಹೂಳೆತ್ತುವ ಕಾಮಗಾರಿ ಸಮರ್ಪಕವಾಗಿ ನಡೆಯದ ಕಾರಣ ಕೃತಕ ನೆರೆಗೆ ಕಾರಣವಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ 32 ಪ್ಯಾಕೇಜ್ ಗಳಿಗೆ ಸ್ಥಳೀಯ 2ರಿಂದ 5 ಮಂದಿಯ ಆಸಕ್ತ ಸ್ಥಳೀಯರನ್ನು ಹೂಳೆತ್ತುವ ಸಂದರ್ಭ ಮಾಹಿತಿ ಹಾಗೂ ನಿಗಾ ಇರಿಸಲು ಸೂಚಿಸಲಾಗುತ್ತಿದೆ. ಇದಲ್ಲದೆ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ನಿಟ್ಟಿನಲ್ಲಿ ಗ್ಯಾಂಗ್ಗಳನ್ನು ರಚಿಸಲಾಗಿದ್ದು, ಸಮಸ್ಯೆ ಆದಾಗ ತಕ್ಷಣ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಮರ ಬಿದ್ದಾಗ ಉಂಟಾಗುವ ಸಮಸ್ಯೆ ಎದುರಿಸಲು ಈಗಾಗಲೇ ಅರಣ್ಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದ್ದು, ಮಳೆಗಾಲಕ್ಕೆ ಮುಂಚಿತವಾಗಿ ಅಗತ್ಯ ಇರುವಲ್ಲಿ ಮರಗಳ ಕೊಂಬೆ, ರೆಂಬೆ ತೆರವುಗೊಳಿಸಲು ನೂತನ ಆರ್‌ಎಫ್‌ಒ ನಿರ್ದೇಶನದಲ್ಲಿ ಕ್ರಮ ವಹಿಸಲಾಗುತ್ತಿದೆ. ಮೆಸ್ಕಾಂ ವತಿಯಿಂದಲೂ ನಗರ ವ್ಯಾಪ್ತಿಯಲ್ಲಿ ಬೀದಿದೀಪ, ಟ್ರಾನ್ಸ್ ಫಾರ್ಮರ್ ಗಳ ಸುಸ್ಥಿತಿಯನ್ನು ಖಾತರಿ ಪಡಿಸಲು 7 ಮಂದಿಯನ್ನು ನಿಯೋಜಿಸಲಾಗಿದೆ. ಮೇ 20ರೊಳಗೆ ಎಲ್ಲಾ ಮಾಹಿತಿಗಳು ದೊರಕಲಿವೆ ಎಂದವರು ವಿವರ ನೀಡಿದರು.

ಜ್ಯೋತಿ, ಪಂಪ್ ವೆಲ್ ಮೊದಲಾದ ಕೃತಕ ನೆರೆ ಸಂಭವಿಸುವ ಕಡೆಗಳಲ್ಲಿಯೂ ಹೂಳೆತ್ತುವ ಕಾಮಗಾರಿ ನಡೆಯಲಿದೆ. ಪಂಪ್ ವೆಲ್ ನಲ್ಲಿ ಐದು ಕಡೆಗಳಿಂದ ನೀರು ಹರಿದು ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೂರು ಕಡೆಗಳ ನೀರು ಹರಿಯುವಿಕೆ ತಡೆಯಲು ಕ್ರಮ ವಹಿಸಲಾಗುತ್ತಿದೆ. ಸರ್ವೀಸ್ ರಸ್ತೆ ಸೇತುವೆಯನ್ನು ಒಂದು ಮೀಟರ್ ಎತ್ತರಕ್ಕೆ ಏರಿಸಲು, ಮಸೀದಿ ಬಳಿ ಕಾಲುವೆ ಅಗಲೀಕರಣಕ್ಕೆ ಕ್ರಮ ವಹಿಸಲಾಗಿದೆ. ಟಿಎಂಎ ಪೈ ಎದುರಿನ ಸೇತುವೆಯ ಎತ್ತರವನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಮಳೆಗಾಲದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಮನಪಾ ಆಯುಕ್ತ ರವಿಚಂದ್ರ ನಾಯಕ್ ಹಾಗೂ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article