ಡಿಜಿಟಲ್ ಅರೆಸ್ಟ್: 2.07 ಕೋ.ರೂ. ವಂಚನೆ
ಮಂಗಳೂರು: ನ್ಯಾಷನಲ್ ಡಾಟಾ ಪ್ರೊಟೆಕ್ಷನ್ ಸೆಂಟರ್ ಅಧಿಕಾರಿ ಎಂದು ಹೇಳಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಿರಿಯ ನಾಗರಿಕರೊಬ್ಬರಿಗೆ 2.07 ಕೋ.ರೂ. ವಂಚನೆ ಮಾಡಿರುವ ಕುರಿತಂತೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
61 ವರ್ಷ ಪ್ರಾಯದ ದೂರುದಾರರಿಗೆ ಮಾ.31ರಂದು ಮೊಬೈಲ್ ಗೆ ಸಾಮಾನ್ಯ ಕರೆಯೊಂದು ಬಂದಿದೆ. ಕರೆ ಮಾಡಿದ ವ್ಯಕ್ತಿ ನ್ಯಾಷನಲ್ ಡಾಟಾ ಪ್ರೊಟೆಕ್ಷನ್ ಸೆಂಟರ್ ನ ಅಧಿಕಾರಿ ಎಂದು ಆಂಗ್ಲಭಾಷೆಯಲ್ಲಿ ಪರಿಚಯಿಸಿಕೊಂಡಿದ್ದಾನೆ. ‘ನಿಮ್ಮ ಗುರುತಿನ ಚೀಟಿ ಬಳಸಿಕೊಂಡು ಮುಂಬಯಿ ಮೂಲದ ವ್ಯಕ್ತಿಯೊಬ್ಬ ಸಿಮ್ ಖರೀದಿಸಿ ಮುಂಬಯಿನ ಸಾರ್ವಜನಿಕರಿಗೆ ಬೆದರಿಕೆ ಕರೆ ಮಾಡಿದ್ದಾನೆ. ಜತೆಗೆ ಅಶ್ಲೀಲ ಫೋಟೊ, ವಿಡಿಯೋಗಳನ್ನು ಕಳುಹಿಸುತ್ತಿದ್ದಾನೆ. ಮಾದಕ ವಸ್ತು ಮಾರಾಟ ಮಾಡಲೂ ಅದೇ ಸಿಮ್ ಬಳಸುತ್ತಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲೆ ಕೊಲಾಬ ಪೊಲೀಸ್ ಠಾಣೆಯಲ್ಲಿ 30-50 ಎಫ್‌ಐಆರ್ ದಾಖಲಾಗಿದೆ. ಇದರಿಂದ ಕ್ಲಿಯರೆನ್ಸ್ ನೀಡಲು ಎನ್‌ಐಎ ಮತ್ತು ಇಡಿ ಅಧಿಕಾರಿಗಳು ಕರೆ ಮಾಡಿ ಪರಿಶೀಲಿಸಲಿದ್ದಾರೆ’ ಎಂದು ತಿಳಿಸಿದ್ದಾನೆ.
ಇದನ್ನು ದೂರುದಾರರು ಸತ್ಯವೆಂದೇ ನಂಬಿದ್ದಾರೆ. ಅನಂತರ ದೂರುದಾರರ ವಾಟ್ಸ್ ಆಪ್‌ಗೆ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ಎನ್‌ಐಎ ಅಧಿಕಾರಿ ಸಂದೀಪ್ ರಾವ್ ಎಂದು ತಿಳಿಸಿದ್ದಾನೆ. ಎಡಿಜಿಪಿ ಮ್ಯಾಥ್ಯೂ ಅವರು ತಿಳಿಸಿದಂತೆ ನಿಮ್ಮ ಬಯೋಡಾಟಾ ಬೇಕು ಎಂದು ಕೇಳಿ ತೆಗೆದುಕೊಂಡಿದ್ದಾನೆ. ಅನಂತರ ಇಡಿ ಅಧಿಕಾರಿ ವಿಲಾಸ್ ರಾವ್ ಪಟೇಲ್ ಜತೆ ಮಾತನಾಡುವಂತೆ ತಿಳಿಸಿದ್ದಾನೆ.
ಆತನ ಜತೆ ಮಾತನಾಡಿದಾಗ, ‘ನಮ್ಮ ದಾಖಲೆಗಳ ಪ್ರಕಾರ ನೀವು ದೊಡ್ಡ ಕ್ರಿಮಿನಲ್. ನಿಮ್ಮ ಮೇಲೆ ಅನೇಕ ಕೇಸ್‌ಗಳು ದಾಖಲಾಗಿದ್ದು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ‘ ಎಂದು ಬೆದರಿಸಿದ್ದಾನೆ. ಇದನ್ನು ಸತ್ಯವೆಂದೇ ನಂಬಿದ ದೂರುದಾರರು, ಆತನ ನಿರ್ದೇಶನದಂತೆ ಎ.7ರಿಂದ 18ರ ವರೆಗೆ ಹಂತ ಹಂತವಾಗಿ ಒಟ್ಟು 2,07,04,600 ರೂ.ವನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಆರ್ ಟಿಜಿಎಸ್ ಮಾಡಿದ್ದಾರೆ. ಈ ವಿಚಾರವನ್ನು ಮನೆಯವರ ಗಮನಕ್ಕೆ ತಂದಾಗ ಮೋಸ ಹೋಗಿರುವುದು ತಿಳಿದು ಬಂದಿದೆ.
ಯಾರೋ ಅಪರಿಚಿತ ವ್ಯಕ್ತಿಗಳು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಆನ್ ಲೈನ್ ಮೂಲಕ 2,07,04,600 ರೂ ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ. ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ನಿವೃತ್ತ ಬ್ಯಾಂಕ್ ಉದ್ಯೋಗಿ ಸಂತ್ರಸ್ತ ದೂರುದಾರರು ಬ್ಯಾಂಕ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದರು. ಮಕ್ಕಳು ಬೇರೆ ಕಡೆ ಉದ್ಯೋಗದಲ್ಲಿದ್ದು, ಪತ್ನಿಯೊಂದಿಗೆ ವಾಸವಾಗಿದ್ದರು. ಪತ್ನಿ ಬೇರೆ ಕಡೆಗೆ ತೆರಳಿದ್ದ ವೇಳೆ ಮನೆಯಲ್ಲಿ ಒಬ್ಬರೇ ಇದ್ದಾಗ ಈ ವಂಚನೆ ಪ್ರಕರಣ ನಡೆದಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಜೀವಿತಾವಧಿಯಲ್ಲಿ ದುಡಿದು ಮಾಡಿದ ಉಳಿತಾಯನ್ನು ಅವರು ಕಳೆದುಕೊಂಡಿದ್ದಾರೆ.