ಜೊತೆಯಾಗಿ ಶ್ರಮಿಸಿದಾಗ ಯಶಸ್ಸು ಕಾಣಲು ಸಾಧ್ಯ: ಡಾ. ಎಂ.ಪಿ. ಶ್ರೀನಾಥ್

ಜೊತೆಯಾಗಿ ಶ್ರಮಿಸಿದಾಗ ಯಶಸ್ಸು ಕಾಣಲು ಸಾಧ್ಯ: ಡಾ. ಎಂ.ಪಿ. ಶ್ರೀನಾಥ್


ಮಂಗಳೂರು: ಯಾವುದೇ ಸಮಾರಂಭ, ಸಮ್ಮೇಳನದ ಯಶಸ್ಸು ಆ ಊರಿನ ಜನರ ತೊಡಗುವಿಕೆಯ ಮೇಲೆ ಅವಲಂಬಿತವಾಗಿದೆ. ಊರಿನ ಮಂದಿ ತಮ್ಮ ಅಹಂ, ಅಂತಸ್ತು ಮರೆತು ಸಮಾನ ಮನಸ್ಕರಾಗಿದ್ದುಕೊಂಡು ಜೊತೆಯಾಗಿ ಶ್ರಮಿಸಿದಾಗ ಅಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಹೇಳಿದರು.

ಅವರು ಬಂಟ್ವಾಳದ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದಿದ್ದ 28ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಕೃತಜ್ಞತಾ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ನಿಟ್ಟಿನಲ್ಲಿ ಬಂಟ್ವಾಳದಲ್ಲಿ ನಡೆದ ೨೮ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಸರ್ವ ರೀತಿಯಲ್ಲಿ ಯಶಸ್ಸು ಕಂಡು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ ಎಂದರು.

ಬಂಟ್ವಾಳದಲ್ಲಿ ತನ್ನ ಅವಧಿಯಲ್ಲಿ ನಡೆದ ಯಾವುದೇ ಸಾಹಿತ್ಯ ಸಮ್ಮೇಳನವು ಹಣಕಾಸಿನ ಕೊರತೆಯನ್ನು ಕಾಣದೆ ವಿಭಿನ್ನವಾಗಿ, ವಿಶಿಷ್ಠವಾದ ರೀತಿಯಲ್ಲಿ ಎಲ್ಲೆಡೆ ಮಾದರಿಯಾಗುವಂತೆ ನಡೆದುಕೊಂಡು ಬಂದಿದೆ. ಈ ಹಿಂದೆ ಅಮ್ಮುಂಜೆ ಮತ್ತು ಮಂಚಿಯಲ್ಲಿ ನಡೆದ ಸಮ್ಮೇಳನಗಳೂ ಯಾವುದೇ ಲೋಪಗಳಿಲ್ಲದೆ ನಡೆದಿರುವುದನ್ನು ಉಲ್ಲೇಖಿಸಿ, ಈ ಬಾರಿಯ ಜಿಲ್ಲಾ ಸಮ್ಮೇಳನವೂ ಎಲ್ಲಕ್ಕಿಂತ ಮಿಗಿಲು ಎನ್ನುವಂತೆ ಎಲ್ಲ ವರ್ಗದವರಿಗೂ ಮೆಚ್ಚುಗೆಯಾಗುವಂತೆ ಮೂರು ದಿನಗಳ ಕಾಲ ನಡೆಯಿತು. ಇದಕ್ಕಾಗಿ ಶ್ರಮಿಸಿದ ಸ್ವಾಗತ ಸಮಿತಿ, ಜಿಲ್ಲಾ ಸಮಿತಿ ಮತ್ತು ಬಂಟ್ವಾಳ ಕಸಾಪ ಘಟಕ ಹಾಗೂ ಆರ್ಥಿಕ ಮತ್ತು ತನು ಮನದ ಸಹಕಾರ ನೀಡಿದ ಬಂಟ್ವಾಳದ ಸರ್ವ ನಾಗರಿಕರಿಗೆ, ಕನ್ನಡಾಭಿಮಾನಿಗಳಿಗೆ ಅಭಿನಂದನೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸಬೇಕಾದ್ದು ನಮ್ಮ ಕರ್ತವ್ಯವಾಗುತ್ತದೆ ಎಂದರು.

ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ರಾಜೇಶ್ವರಿ ಮಾತನಾಡಿ ಯಾವುದೇ ಕಾರ್ಯಕ್ರಮದ ಯಶಸ್ಸಿನ ಗುಟ್ಟು ಅದರಲ್ಲಿ ತೊಡಗಿಸಿಕೊಂಡಿರುವವರ ಕನ್ನಡದ ಮೇಲಿನ ಪ್ರಾಮಾಣಿಕ ಕಳಕಳಿಯ ಸೇವೆಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಬಂಟ್ವಾಳದ ಜಿಲ್ಲಾ ಸಮ್ಮೇಳನದ ಯಶಸ್ಸು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗಿರಿಸಿ ಪಾಲ್ಗೊಂಡವರಿಂದ ಸಾಧ್ಯವಾಗಿದ್ದು ಅವರನ್ನು ಅತ್ಯಂತ ಗೌರವದಿಂದ ಅಭಿನಂದಿಸಬೇಕು ಎಂದರು.  

ಸಮ್ಮೇಳನದ ಯಶಸ್ಸಿನ ಕುರಿತಾಗಿ ಸ್ವಾಗತ ಸಮಿತಿಯ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಪುತ್ತೂರು ಕಸಾಪ ಘಟಕದ ಅಧ್ಯಕ್ಷ ಉಮೇಶ್ ನಾಯಕ್, ಸ್ವಾಗತ ಸಮಿತಿಯ ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಉದಯ್ ಬಂಟ್ವಾಳ ಕಸಾಪ ಘಟಕದ ವಿ.ಸು. ಭಟ್, ಅಬ್ದುಲ್ ರಹಿಮಾನ್ ಡಿ.ಬಿ. ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಅಮ್ಮುಂಜೆಯವರನ್ನು ಜಿಲ್ಲಾ ಕಸಾಪ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಬೆಳ್ತಂಗಡಿ ಕಸಾಪ ಅಧ್ಯಕ್ಷ ಯದುಪತಿ ಗೌಡ, ಬಂಟ್ವಾಳ ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಮೂಡಬಿದಿರೆ ಕಸಾಪ ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಕಲಾವಿದ ಹೆಚ್.ಕೆ. ನಯನಾಡ್, ಸ್ವಾಗತ ಸಮಿತಿ ಕಾರ್ಯದರ್ಶಿ ದೇವಪ್ಪ ಕುಲಾಲ್, ಪಾಣೆಮಂಗಳೂರು ಹೋಬಳಿ ಅಧ್ಯಕ್ಷ ಮಹಮ್ಮದ್ ಪಾಣೆಮಂಗಳೂರು, ಜಿಲ್ಲಾ ಸದಸ್ಯ ಪೂವಪ್ಪ ನೇರಳಕಟ್ಟೆ, ಅಬ್ಬಾಸ್ ಅಲಿ, ಜಯರಾಮ ಪಡ್ರೆ, ಸತೀಶ್ ಕಾರ್ತಿಕ್, ಸನತ್ ಕುಮಾರ್ ಜೈನ್, ಜನಾರ್ದನ ಅಮ್ಮುಂಜೆ, ಮೋಹನ್ ಸಾಲಿಯಾನ್ ಬೆಂಜನಪದವು, ನಾರಾಯಣ ಬಡಕಬೈಲು, ರಜನಿ ಚಿಕ್ಕಯಮಠ, ಸನ್ಮತಿ ಜೈನ್, ಗೀತಾ ಕೊಂಕೋಡಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article