235.68 ಕೋಟಿ ರೂ. ಕಾಮಗಾರಿ ಪ್ರಗತಿ: ಐವನ್ ಡಿಸೋಜಾ

235.68 ಕೋಟಿ ರೂ. ಕಾಮಗಾರಿ ಪ್ರಗತಿ: ಐವನ್ ಡಿಸೋಜಾ

ಮಂಗಳೂರು: ರಾಜ್ಯ ಸರ್ಕಾರದ ಅಮೃತ್ ಯೋಜನೆ, ಜಲ್ ಹೀ ಅಮೃತ್, ಒಳಚರಂಡಿ ಸೇರಿದಂತೆ ಮಂಗಳೂರು ನಗರದಲ್ಲಿ 235.68 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಹಾಗಾಗಿ ಮಂಗಳೂರು ನಗರದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೇಡ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಸ್ಥಳೀಯ ಶಾಸಕರ ಹೇಳಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದಿಂದ ಅನುದಾನ ಬಂದ ಕಾರಣ ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ- 2ರಡಿ 165 ಕೋಟಿ ರೂ.ಗಳ ಕಾಮಗಾರಿ ಆಗಿದ್ದು ಅದರ ಉದ್ಘಾಟನೆ ಕಾರ್ಯಕ್ರಮ ನಮ್ಮನ್ನೆಲ್ಲಾ ಕರೆಯದೇ ನಡೆಸುವ ಶಾಸಕರು ಹಣ ಎಲ್ಲಿಂದ ಬಂತು ಎಂದು ಯಾಕೆ ಹೇಳುವುದಿಲ್ಲ. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ -1ರಡಿ ಬಿಜೆಪಿಯ ಆಡಳಿತವಿದ್ದ ಕಾಲದಲ್ಲಿ ತ್ರಿಬಲ್ ಇಂಜಿನ್ ಸರ್ಕಾರವಿದ್ದರೂ ಯೋಜನೆ ಯಾಕೆ ಪೂರ್ತಿಗೊಳಿಸಲಾಗಿಲ್ಲ. ಚುನಾವಣೆಗೆ ಮೂರು ತಿಂಗಳು ಪೂರ್ವಭಾವಿಯಾಗಿ ಹಣಕಾಸು ಅನುಮೋದನೆ ಪಡೆಯದೇ, ಚಪ್ಪರ ಹಾಕಿ ಶಿಲಾನ್ಯಾಸ ಮಾಡಲಾಗಿತ್ತು. ಬಳಿಕ ಹಣ ಸಿಗದೆ  ಗುತ್ತಿಗೆದಾರರು ನ್ಯಾಯಾಲಯಕ್ಕೆ ಹೋಗಿದ್ದು ಯಾಕೆ ಎಂಬುದನ್ನು ಸದಾ ರಾಜಕೀಯ ಮಾತನಾಡುವ ಶಾಸಕರು ಉತ್ತರಿಸಬೇಕು ಎಂದರು.

10 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಗಳ ಹೂಳೆತ್ತುವ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಶಾಸಕರಿಗೆ ಅಭಿವೃದ್ಧಿ ಯೋಜನೆಗಾಗಿ 25 ಕೋಟಿ ರೂ. ಬಿಡುಗಡೆಯಾಗಿದೆ. ಹಾಗಿದ್ದರೂ ಶಾಸಕರು ಅನುದಾನವೇ ಸಿಗುತ್ತಿಲ್ಲ ಎಂದು ಹೇಳುವುದು ಯಾಕೆ, ಇಷ್ಟು ಹಣ ಸಾಕಾಗದು ಎಂಬುದು ನನಗೂ ಅರಿವಿದೆ. ಆದರೆ ವಿಶೇಷ ಯೋಜನೆ ಬರಬೇಕಾದರೆ ಪಕ್ಷಬೇಧ ಮರೆತು ಶಾಸಕರು ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕಿದೆ. ಇದೀಗ ನಗರದ ಒಳಚರಂಡಿ ಯೋಜನೆಯನ್ನು ಮೇಲ್ದರ್ಜೆಗೇರಿಸಲು 1250 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇದಕ್ಕೆ ಸರ್ಕಾರದ ಗಮನ ಸೆಳೆಯುವ ಕೆಲಸ ಆಗಬೇಕಾಗಿದೆ. ನಗರದ ಅಭಿವೃದ್ಧಿಗೆ ನಾವು ಯಾವತ್ತೂ ಬದ್ಧವಾಗಿದ್ದು, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ ಎಂದರು.

ಮುಖಂಡರಾದ ಶಶಿಧರ ಹೆಗ್ಡೆ, ಮಮತಾ ಗಟ್ಟಿ, ಅಪ್ಪಿ, ನವೀನ್ ಡಿಸೋಜಾ, ಸ್ಟಾೃನಿ ಅಲ್ವಾರಿಸ್, ಇಮ್ರಾನ್, ಮನುರಾಜ್, ಕೇಶವ್, ನಾಗೇಂದ್ರ, ಭಾಸ್ಕರ್, ಅಶೋಕ್ ಡಿ.ಕೆ. ಮೊದಲಾದವರು ಉಪಸ್ಥಿತರಿದ್ದರು.

ಕೊಂಕಣಿ ಭವನ ಕಾಮಗಾರಿ ಶೀಘ್ರ ಪೂರ್ಣ

ಕರ್ನಾಟಕ ವಿಧಾನ ಪರಿಷತ್ತಿನ 158ನೆ ಅಧಿವೇಶನದಲ್ಲಿ ಮಂಗಳೂರಿನ ಉರ್ವಾಸ್ಟೋರ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕೊಂಕಣಿ ಭವನ ಕಾಮಗಾರಿ ಪೂರ್ಣಗೊಳಿಸಲು 3 ಕೋಟಿ ರೂ.ಗಳ ಬೇಡಿಕೆ ಇರಿಸಲಾಗಿತ್ತು. ಇದಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಭರವಸೆ ಈಡೇದಿದ್ದರೆ ಆಶ್ವಾಸನಾ ಸಮಿತಿಯಲ್ಲಿ ಪ್ರಶ್ನಿಸಲಾಗುವುದು. ಈಗಾಗಲೇ ಕಟ್ಟಡದೆತ್ತರಕ್ಕೆ ಕುರುಚಲು ಗಿಡಗಳು ಬೆಳೆದು ಖರ್ಚು ಮಾಡಿರುವ 2.69 ಕೋಟಿ ರೂ. ಕೂಡಾ ನಿಷ್ಪ್ರಯೋಜಕವಾಗುವಂತಿದೆ. ಸರ್ಕಾರದ ಹಣ  ಈ ರೀತಿಯಾಗಿ ಪೋಲು ಮಾಡಲು ಅವಕಾಶ ನೀಡಬಾರದೆಂಬ ನಿಟ್ಟಿನಲ್ಲಿ, ಕೊಂಕಣಿ ಅಕಾಡೆಮಿಯ ಚಟುವಟಿಕೆಗಳಿಗೆ ಈ ಭವನದ ತುರ್ತು ಅಗತ್ಯ ಇರುವುದನ್ನು ಸರಕಾರದ ಗಮನ ಸೆಳೆಯಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article