ಕೈಗಾರಿಕಾ ಬಡಾವಣೆ ಯೋಜನೆ ಕೈಬಿಟ್ಟ ಸರ್ಕಾರ: ಐವನ್ ಡಿಸೋಜ
ಮಂಗಳೂರು: ಬಳ್ಕುಂಜೆ, ಕೊಲ್ಲೂರು, ಉಳೇಪಾಡಿ ಗ್ರಾಮಗಳಲ್ಲಿ ಕೈಗಾರಿಕೆಗಳಿಗೆ 1091.57 ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಕೆಐಎಡಿಬಿ ಪ್ರಕ್ರಿಯೆ ನಡೆಸಿದ್ದು, ಇದರಲ್ಲಿ 250-300 ಎಕರೆ ಮಾತ್ರ ಕೈಗಾರಿಕೆಗಳ ಬಳಕೆಗೆ ಯೋಗ್ಯ ಎಂದು ಸರ್ವೇ ತಂಡ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಬಡಾವಣೆ ಯೋಜನೆಯನ್ನು ಸರ್ಕಾರ ಕೈಬಿಟ್ಟಿದ್ದು, ಈ ಪ್ರದೇಶದ ನಾಗರಿಕರ ಹಲವು ವರ್ಷಗಳ ಹೋರಾಟಕ್ಕೆ ಒಂದು ಹಂತದ ಗೆಲುವು ದೊರಕಿದೆ ಎಂದು ಐವನ್ ಡಿಸೋಜ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯ ವಿಧಾನಪರಿಷತ್ ಅಧಿವೇಶನದಲ್ಲಿ ಭೂಮಾಫಿಯಾದ ಪ್ರಭಾವದಿಂದ ಅವೈಜ್ಞಾನಿಕವಾಗಿ ಉಪಯೋಗವಲ್ಲದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದು ಆಗ್ರಹಿಸಲಾಗಿದೆ. ಇದಕ್ಕೆ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು ಈ ಬಗ್ಗೆ ಉತ್ತರಿಸಿದ್ದು, 1091 ಎಕರೆಯಲ್ಲಿ ಸುಮಾರು 300 ಎಕರೆ ಮಾತ್ರವೇ ಕೈಗಾರಿಕಾ ಬಡವಾಣೆಗೆ ಯೋಗ್ಯವಾಗಿದ್ದು, ಉಳಿದ ಜಮೀನ್ನು ಕೈಬಿಡುವ ಬಗ್ಗೆ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದ್ದಾರೆ.
ಪ್ರಸ್ತಾವಿತ ಜಮೀನುಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯರು ಸ್ಥಳ ತನಿಖೆ ಜರುಗಿಸಿದ್ದಾರೆ. ಪ್ರಸ್ತಾವಿತ ಜಮೀನಿನ ಮೇಲ್ಮೈ ಗುಡ್ಡ, ತಗ್ಗು ಪ್ರದೇಶವನ್ನು ಟೊಪೋಗ್ರಾಫಿಕಲ್ ಸರ್ವೇ ಮಾಡಲಾಗಿದೆ. ಪ್ರಾಥಮಿಕ ಸರ್ವೇ ಪ್ರಕಾರ 1091 ಎಕರೆ ಸ್ವಾಧೀನ ಪ್ರದೇಶದ ಪೈಕಿ 250-300 ಎಕರೆ ಪ್ರದೇಶವನ್ನು ಹೊರತು ಉಳಿಕೆ ಜಮೀನು ಗುಡ್ಡ ಹಾಗೂ ಇಳಿಜಾರಿನಿಂದ ಕೂಡಿರುವುದು ಕಂಡು ಬಂದಿದೆ.
ಏನಿದು ಪ್ರಕರಣ
2020ರ ಫೆಬ್ರವರಿ 6ರಂದು ದ.ಕ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಏಕಗವಾಕ್ಷಿ ಸಮಿತಿ ಸಭೆಯ ನಡವಳಿಯಂತೆ ಈ ಹಿಂದೆ ಗುರುತಿಸಿದ್ದ ಕರ್ನಿರೆ, ಅತಿಕಾರಿಬೆಟ್ಟು ಮತ್ತು ಕವತ್ತಾರು ಗ್ರಾಮದ ಜಮೀನು ಕೈಗಾರಿಕಾ ಪ್ರದೇಶಕ್ಕೆ ಸೂಕ್ತವಾಗಿಲ್ಲ ಹಾಗೂ ಈ ಗ್ರಾಮಗಳಿಗೆ ಹೊಂದಿಕೊಂಡು ಇರುವ ಬಳ್ಕುಂಜೆ ಹಾಗೂ ಇತರ ಗ್ರಾಮಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಜಾಗವನ್ನು ಗುರುತಿಸಲು ನಿರ್ಧರಿಸಲಾಗಿತ್ತು. ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ಮುಲ್ಕಿ ತಾಲೂಕಿನ ಬಳ್ಕುಂಜೆ, ಕೊಲ್ಲೂರು ಮತ್ತು ಉ್ರೈೆಪಾಡಿ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ 2022ರ ಜನವರಿ 7ರಂದು ಪ್ರಾಧಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಕೊಲೂರು ಗ್ರಾಮದ 324.35 ಎಕರೆ ಖಾಸಗಿ ಭೂಮಿ, 58.9350 ಎಕರೆ ಸರ್ಕಾರಿ ಒಟ್ಟು 383.2850 ಎಕರೆ ಭೂಮಿ, ಬಳ್ಕುಂಜೆಯ 301.8850 ಎಕರೆ ಖಾಸಗಿ ಹಾಗೂ 52.95 ಎಕರೆ ಸರ್ಕಾರಿ ಸೇರಿ 354.8350 ಎಕರೆ ಭೂಮಿ, ಉಳೆಪಾಡಿಯ 324.4950 ಎಕರೆ ಖಾಸಗಿ ಹಾಗೂ 29.9550 ಎಕರೆ ಸರ್ಕಾರಿ ಸೇರಿ 353.4500 ಎಕರೆ ಭೂಮಿಯನ್ನು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ವಿಶೇಷವೆಂದರೆ ಈ ಮೂರು ಗ್ರಾಮಗಳಲ್ಲಿ ಅಧಿಸೂಚನೆ ಹೊರಡಿಸಲಾದ 1091.5700 ಎಕರೆ ಭೂಮಿಯಲ್ಲಿ ಸರ್ಕಾರಿ ಭೂಮಿ 141.8400 ಎಕರೆ ಮಾತ್ರ ಆಗಿದ್ದು, ಉಳಿದ 949.7300 ಎಕರೆ ಭೂಮಿ ಖಾಸಗಿಯಾಗಿದೆ.
ಕೈಗಾರಿಕಾ ಬಡವಾಣೆ ರಚಿಸಲು ಭೂಸ್ವಾಧೀನಕ್ಕೆ ಅಧಿಸೂಚನೆಗೊಂಡ ಭೂಮಿ ಸೂಕ್ತವಲ್ಲ ಎಂಬ ವರದಿಯನ್ನು ಸರ್ವೇ ಸಮಿತಿಯು ನೀಡಿದೆ. ಅದರಲ್ಲಿ ಸರ್ಕಾರಿ ಭೂಮಿ ಅತ್ಯಲ್ಪವಾಗಿದ್ದು, ಭೂಮಾಫಿಯಾದ ಪ್ರಭಾವದಿಂದಾಗಿ ಕೈಗಾರಿಕೆಗೆ ಸೂಕ್ತವಲ್ಲದ್ದ ಖಾಸಗಿ ಭೂಮಿ ಖರೀದಿಸಿ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಕೋಟಿ ರೂ. ನಷ್ಟವಾಗುವ ಪ್ರಮೇಯ ತಪ್ಪಿದೆ. ಕೆಲವೊಮ್ಮೆ ಸರ್ಕಾರವು ಯಾವ ರೀತಿಯಲ್ಲಿ ತೊಂದರೆಗೆ ಸಿಲುಕಿಕೊಳ್ಳಬಹುದು ಎಂಬುದಕ್ಕೆ ಇದು ಸೂಕ್ತ ನಿದರ್ಶನವಾಗಿದೆ. ಇದೀಗ ಈ ಭೂಮಿ ಡಿನೋಟಿಫೈ ಆಗುವ ಹಂತದಲ್ಲಿದ್ದು, ಇದು ಸ್ಥಳೀಯರು ಹಲವು ವರ್ಷಗಳ ಕಾಲ ನಡೆಸಿದ ಹೊರಾಟಕ್ಕೆ ಸಂದ ಜಯ ಎಂದು ಐವನ್ ಡಿಸೋಜಾ ಹೇಳಿದರು.