ಝಬೇರ್ ಕೊಲೆ: ಅಪರಾಧಿಗೆ ಜೀವಾವಧಿ ಸಜೆ

ಝಬೇರ್ ಕೊಲೆ: ಅಪರಾಧಿಗೆ ಜೀವಾವಧಿ ಸಜೆ

ಮಂಗಳೂರು: ಉಳ್ಳಾಲದ ಮುಕ್ಕಚ್ಚೇರಿಯಲ್ಲಿ 2017ರ ಅಕ್ಟೋಬರ್ 4ರಂದು ನಡೆದಿದ್ದ ಝಬೇರ್ ಎಂಬುವವರ ಕೊಲೆ ಮತ್ತು ಇಲ್ಯಾಸ್ ಎಂಬುವವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಅಬ್ದುಲ್ ರಹ್ಮಾನ್ ಸುಹೇಲ್‌ಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 

2017ರ ಅಕ್ಟೋಬರ್ 4ರಂದು ರಾತ್ರಿ ಜುಬೇರ್ ಮತ್ತು ಇಲ್ಯಾಸ್ ಮಾತನಾಡುತ್ತಿದ್ದಾಗ ಮಾರಕಾಸ್ತ್ರಗಳೊಂದಿಗೆ ಬಂದ ತಂಡವೊಂದು ಅವರ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಜುಬೇರ್ ಕೊಲೆಯಾಗಿದ್ದರು. ಮಧ್ಯಪ್ರವೇಶಿಸಲು ಯತ್ನಿಸಿದ ಇಲ್ಯಾಸ್ ಅವರ ಮೇಲೆಯೂ ತಲ್ವಾರಿನಿಂದ ಹಲ್ಲೆ ನಡೆಸಲಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಅಂದಿನ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಕೆ.ಆರ್. ಅವರು ಆರೋಪಿಗಳಾದ ಅಬ್ದುಲ್ ರಹ್ಮಾನ್ ಸುಹೇಲ್, ನಿಝಾಮ್ ಅಲಿಯಾಸ್ ನಿಝಾಮುದ್ದೀನ್, ತಾಜುದ್ದೀನ್, ಮುಸ್ತಫಾ ಅಲಿಯಾಸ್ ಮುಹಮ್ಮದ್ ಮುಸ್ತಫಾ, ಅಲ್ತಾಫ್, ಆಸಿಫ್ ಅಲಿಯಾಸ್ ಮಂದ ಆಸೀಫ್ ಮತ್ತು ನಾಸಿರ್ ಅಲಿಯಾಸ್ ಕಡಪ್ಪರ ನಾಸಿರ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರ ಏಪ್ರಿಲ್ 20ರಂದು ನ್ಯಾಯಾಲಯವು ನಿಝಾಮ್, ತಾಜುದ್ದೀನ್ ಮತ್ತು ಮುಸ್ತಫಾಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆಸೀಫ್ ಮತ್ತು ನಾಸಿರ್ ಖುಲಾಸೆಗೊಂಡಿದ್ದರು. ಐದನೇ ಆರೋಪಿ ಅಲ್ತಾಫ್ ಮೃತಪಟ್ಟಿದ್ದರು.

ಪ್ರಕರಣದ ಮುಖ್ಯ ಆರೋಪಿ ಅಬ್ದುಲ್ ರಹ್ಮಾನ್ ಸುಹೇಲ್ ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಬಳಿಕ ಪೊಲೀಸರು ಆತನನ್ನು ಮತ್ತೆ ಬಂಧಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುನಿತಾ ಅವರು ಏಪ್ರಿಲ್ 22ರಂದು ತೀರ್ಪು ಪ್ರಕಟಿಸಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಕೀಲ ಮೋಹನ್ ವಾದ ಮಂಡಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article