‘ಕುಡಿಯುವ ನೀರು ಯೋಜನೆಗಳನ್ನು ತ್ವರಿತ ಪೂರ್ಣಗೊಳಿಸಿ’: ದಿನೇಶ್ ಗುಂಡೂರಾವ್

‘ಕುಡಿಯುವ ನೀರು ಯೋಜನೆಗಳನ್ನು ತ್ವರಿತ ಪೂರ್ಣಗೊಳಿಸಿ’: ದಿನೇಶ್ ಗುಂಡೂರಾವ್


ಮಂಗಳೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಶೀಘ್ರವಾಗಿ ನೀರು ಪೂರೈಕೆಗೆ ಒತ್ತು ನೀಡಬೇಕೆಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಅವರು ಶುಕ್ರವಾರ  ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಿಲ್ಲೆಯಲ್ಲಿ ಬೇಸಿಗೆಯಿಂದ ತಲೆದೋರಬಹುದಾದ ಸಮಸ್ಯೆಗಳ ಪರಿಹಾರಕ್ಕೆ  ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ  ಸಭೆ ನಡೆಸಿ  ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ೫ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ನಡೆಯುತ್ತಿವೆ.   ಈ ಕಾಮಗಾರಿ ಪೂರ್ಣಗೊಂಡರೆ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಗೊಳ್ಳಲಿದೆ. ಕೆಲವೆಡೆ ಅರಣ್ಯ ಭೂಮಿ ಸಮಸ್ಯೆ ಕಂಡುಬಂದಿದ್ದು, ಅರಣ್ಯ ಇಲಾಖೆಯೊಂದಿಗೆ  ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕೆಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ ಮಾತನಾಡಿ, ಬೆಳ್ತಂಗಡಿ ತಾಲೂಕಿನ ಇಳಂತಿಲ, ಕಡಬ ತಾಲೂಕಿನ ಅಲಂಕಾರು, ಮತ್ತು ಕುಟ್ರುಪ್ಪಾಡಿ, ಬಂಟ್ವಾಳ ತಾಲೂಕಿನ ಅಳಿಕೆ, ಉಳ್ಳಾಲ ತಾಲೂಕಿನ ಕೈರಂಗಳದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ.  ಕಾಮಗಾರಿ ತ್ವರಿತಗೊಳಿಸಲು ಸೂಚಿಸಲಾಗಿದ್ದು, ಮುಂದಿನ 6-7 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಮರವೂರು ಅಣೆಕಟ್ಟಿನ ಗೇಟ್ಗಳನ್ನು ಬದಲಾಯಿಸಲು 1 ಕೋ.ರೂ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮಾತನಾಡಿ, ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ಪ್ರಸ್ತುತ ೫.೫ ಮೀಟರ್ ನೀರು ಲಭ್ಯವಿದೆ. ನಗರದಲ್ಲಿ ನೀರು ಸರಬರಾಜು ಉತ್ತಮ ಸ್ಥಿತಿಯಲ್ಲಿದೆ. ಎತ್ತರದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮೀಣ ಪ್ರದೇಶದ ಹಾಗೂ ನಗರ ಪಟ್ಟಣ ಪ್ರದೇಶಗಳ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.  ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು. ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಲಸಿರಿ ಅಸಮಾಧಾನ..

ಮಂಗಳೂರು ನಗರದಲ್ಲಿ ನಡೆಯುತ್ತಿರುವ ಜಲಸಿರಿ ಯೋಜನೆಯ ಕಾಮಗಾರಿ ಅನುಷ್ಠಾನ ಶೈಲಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಸ್ತುವಾರಿ ಸಚಿವರು, ಪೈಪ್‌ಗಳನ್ನು ಅಳವಡಿಸಲು ಮುಖ್ಯ ರಸ್ತೆಗಳನ್ನು ಅಗೆದು, ದೀರ್ಘ ಕಾಲ ರಸ್ತೆಯನ್ನು ಯಥಾಸ್ಥಿತಿಗೆ ತಾರದೆ, ಸಂಚಾರ ವ್ಯವಸ್ಥೆಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಅಗೆದಿರುವ ರಸ್ತೆಗಳನ್ನು ಕೂಡಲೇ ಆದ್ಯತೆಯಲ್ಲಿ ಪುನಶ್ಚೇತನಗೊಳಿಸಬೇಕು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಯು.ಐ.ಡಿ.ಎಫ್.ಸಿ. ಅಧಿಕಾರಿಗಳು, ರಸ್ತೆಯನ್ನು ಯಥಾಸ್ಥಿತಿಗೆ ತರಲು ಅಭಿಯಾನ ಮಾಡಿ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ನರ್ವಾಡೆ ವಿನಾಯಕ್ ಕಾರ್ಬಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ  ಆಂಟನಿ ಮರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article