ಫಾದರ್ ಮುಲ್ಲರ್ ಮೆಡಿಕಲ್, ಅಲೈಡ್ ಹೆಲ್ತ್ ಆಂಡ್ ಫಿಸಿಯೋಥೆರಪಿ ಕಾಲೇಜುಗಳ ಪದವಿ ಪ್ರದಾನ

ಫಾದರ್ ಮುಲ್ಲರ್ ಮೆಡಿಕಲ್, ಅಲೈಡ್ ಹೆಲ್ತ್ ಆಂಡ್ ಫಿಸಿಯೋಥೆರಪಿ ಕಾಲೇಜುಗಳ ಪದವಿ ಪ್ರದಾನ


ಮಂಗಳೂರು: ಫಾದರ್‌ಮುಲ್ಲರ್ ಮೆಡಿಕಲ್, ಅಲೈಡ್ ಹೆಲ್ತ್ ಆಂಡ್ ಫಿಸಿಯೋಥೆರಪಿ ಕಾಲೇಜುಗಳ ಪದವಿ ಪ್ರದಾನ ಸಮಾರಂಭ ಶುಕ್ರವಾರ ಕಂಕನಾಡಿಯ ಫಾದರ್ ಮುಲ್ಲರ್‌ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಿತು.

ಕರ್ನಾಟಕ ವಿವಿಯ ಕುಲಪತಿ ಡಾ. ಎ.ಎಂ. ಖಾನ್ ಅವರು ಪದವಿ ಪ್ರದಾನ ಸಮಾರಂಭ ನೆರವೇರಿಸಿ ಮಾತನಾಡಿ, ಪದವೀಧರರು ವೈದ್ಯರಾಗಿಯೇ ಉಳಿಯದೆ ಇಂದಿನ ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಮುನ್ನಡೆಯಬೇಕು. ಅವುಗಳ ನಡುವೆ ದೃಢತೆ, ಆತ್ಮಸ್ಥೈರ್ಯ ವೈದ್ಯಕೀಯ ರಂಗದಲ್ಲಿ ಮುನ್ನಡೆಯಲು ಸಾಧ್ಯವಿದೆ. ರೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಿಕಿತ್ಸೆ ನೀಡುವ ಕೆಲಸವಾಗಬೇಕು ಎಂದರು.

ರಾಜ್ಯ ವೈದ್ಯಕೀಯ ನಿರ್ದೇಶನಾ ಲಯದ ಜಂಟಿ ನಿರ್ದೇಶಕ ಡಾ. ಎಸ್. ವೆಂಕಟ ರಾಘವ ಅವರು ಮಾತನಾಡಿ, ಇಂದು ಸಾಕಷ್ಟು ಹೊಸತನದೊಂದಿಗೆ ಜಗತ್ತು ಮುಂದುವರಿದಿದೆ. ನವೀನ ತಂತ್ರಜ್ಞಾನಗಳು ರೋಗಿಗಳಿಗೆ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವಂತೆ ಮಾಡಿದ್ದು, ಇಂತಹ ಸಂದರ್ಭದಲ್ಲಿ ಪರಿಪೂರ್ಣ ಜ್ಞಾನ ಹೊಂದಿರಬೇಕು ಎಂದರು.

ಫಾದರ್‌ಮುಲ್ಲರ್ ಸಂಸ್ಥೆಗಳ ಅಧ್ಯಕ್ಷ ಹಾಗೂ ಮಂಗಳೂರು ಬಿಷಪ್ ಅ.ವಂ. ಡಾ. ಪೀಟರ್‌ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷತೆ ವಹಿಸಿದ್ದರು.

518 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಫ್‌ಎಂಸಿಐ ರೆಸಿಡೆನ್ಸ್ ಗೋಲ್ಡ್ ಮೆಡಲನ್ನು ಡಾ. ಕೃತಿಕಾ ಸಾಗ್ರಿ ನಾಯಕ್ ಅವರಿಗೆ ನೀಡಿ ಗೌರವಿಸಲಾಯಿತು. ಎಫ್‌ಎಂಸಿಒಪಿಯ ಬೆಸ್ಟ್ ಔಟ್ ಗೋಯಿಂಗ್ ಬ್ಯಾಚುಲರ್‌ಆಫ್ ಫಿಸಿಯೋಥೆರಪಿ ಪದವೀಧರೆಗಾಗಿ ನೀಡುವ ದಿ. ಜಾನ್ ಲಿನು ವರ್ಗೀಸ್ ಸ್ಮಾರಕ ಪ್ರಶಸ್ತಿಯನ್ನು ಇಶ್ರತ್ ಫಾತಿಮಾ ಅಬ್ಟಾಸಿ ಪಡೆದರು. ಎಫ್‌ಎಂಸಿಒಎಎಚ್‌ಎಸ್ ಬೆಸ್ಟ್ ಔಟ್ ಗೋಯಿಂಗ್ ಬ್ಯಾಚುಲರ್ ಪದವೀಧರೆ ಪ್ರಶಸ್ತಿಯನ್ನು ಮರಿಯಮ್ ಜುಹಾಮ್ ಪಿ.ಎಸ್. ಅವರಿಗೆ ನೀಡಲಾಯಿತು. ವಿವಿಧ ರ‍್ಯಾಂಕ್ ವಿಜೇತರನ್ನು ಸಮ್ಮಾನಿಸಲಾಯಿತು.

ಫಾದರ್ ಮುಲ್ಲರ್‌ಸಂಸ್ಥೆಗಳ ನಿರ್ದೇಶಕ ವಂ| ಫಾವುಸ್ತಿನ್ ಲೂಕಸ್ ಲೋಬೊ ಪ್ರಸ್ತಾವಿಸಿ ಸ್ವಾಗತಿಸಿದರು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಗಳಾದ ವಂ. ಮೈಕಲ್ ಸಾಂತುಮಾಯೊರ್, ಡೀನ್ ಡಾ| ಆಂಟನಿ ಸಿಲ್ವನ್ ಡಿ’ಸೋಜಾ, ವೈಸ್ ಡೀನ್ ಡಾ. ವೆಂಕಟೇಶ್ ಬಿ.ಎಂ., ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ವಂ. ಜಾರ್ಜ್ ಜೀವನ್ ಸಿಕ್ವೇರಾ, ವೈದ್ಯಕೀಯ ಅಧೀಕ್ಷಕ ಡಾ. ಉದಯ್ ಕುಮಾರ್, ಪ್ರಾಂಶುಪಾಲರಾದ ಡಾ. ಶಿವಶಂಕರ ಎ.ಆರ್., ಪ್ರೊ. ಚರಿಷ್ಮಾ ಡಿ’ಸಿಲ್ವಾ ಮತ್ತಿತರರಿದ್ದರು.

ವೈದ್ಯರ ಕೈಗಳಿಗೆ ವಿಶೇಷ ಶಕ್ತಿ ಇದೆ: ಬಿಷಪ್

ರೋಗಿಗಳಲ್ಲಿರುವ ಆತಂಕ ದೂರಮಾಡಬೇಕು. ಅವರಿಗೆ ಭರವಸೆ, ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು. ರೋಗಿಗಳಿಗೆ ಚಿಕಿತ್ಸೆ ನೀಡುವ ಜತೆಗೆ ವೈದ್ಯರ ಮಾತುಗಳು ಗುಣಪಡಿಸುವ ಶಕ್ತಿ ಹೊಂದಿರಬೇಕು. ವೈದ್ಯರ ಕೈಗಳಿಗೆ ಮಾತ್ರವೇ ಗುಣಪಡಿಸುವ ವಿಶೇಷ ಶಕ್ತಿ ಹೊಂದಿರುತ್ತದೆ. ನಿಮಿಱಂದ ಸಮಾಜದಲ್ಲಿ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುವ ಜತೆಗೆ ಜನ ಆರಾಮದಾಯಕ ಜೀವನ ನಡೆಸಲು ಸಾಧ್ಯವಾಗಲಿ ಎಂದು ಫಾದರ್‌ಮುಲ್ಲರ್‌ಸಂಸ್ಥೆಗಳ ಅಧ್ಯಕ್ಷ ಹಾಗೂ ಮಂಗಳೂರು ಬಿಷಪ್ ಅ. ವಂ. ಡಾ. ಪೀಟರ್‌ಪಾವ್ಲ್ ಸಲ್ಡಾನ್ಹಾ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article