ಹಸಿರು ವಲಯ ಭೂಸ್ವಾಧೀನ ಪ್ರಕ್ರಿಯೆ ಆರಂಭಕ್ಕೆ ಒತ್ತಾಯ
ಮಂಗಳೂರು: ಸಂತ್ರಸ್ತರ ಬದುಕಿನೊಂದಿಗೆ ಎಂಆರ್‌ಪಿಎಲ್ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿರುವ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯು, ಎಂಆರ್‌ಪಿಎಲ್ ಹಾಗೂ ದ.ಕ.ಜಿಲ್ಲಾಡಳಿತವು ತಕ್ಷಣ ಹಸಿರು ವಲಯ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದು ವಾರದೊಳಗೆ ಆರಂಭಿಸಬೇಕು. ಇಲ್ಲದಿದ್ದಲ್ಲಿ ಸಂತ್ರಸ್ತ ಗ್ರಾಮಸ್ಥರನ್ನು ಸಂಘಟಿಸಿ ಎಂಆರ್‌ಪಿಎಲ್ ಮುಂಭಾಗ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ ಅರಂಭಿಸುವುದಾಗಿ ಎಚ್ಚರಿಸಿದೆ.
ನಗರದ ಖಾಸಗಿ ಹೊಟೇಲಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ ಎಂಆರ್‌ಪಿಎಲ್
ಮೂರನೆ ಹಂತದ ಕೋಕ್ ಸಲ್ಪರ್ ಘಟಕದಿಂದ ಉಂಟಾದ ಮಾರಕ ಮಾಲಿನ್ಯದಿಂದ ಸಂತ್ರಸ್ತರಾದ ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮಸ್ಥರು 2014ರಲ್ಲಿ ಕಂಪೆನಿಯ ವಿರುದ್ದ ಹೋರಾಟ ಸಂಘಟಿಸಿದ್ದರು. ಅಂದಿನ ರಾಜ್ಯ ಸರಕಾರವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಸುಮಾರು ಎರಡು ವರ್ಷಗಳ ಹೋರಾಟದ ಬಳಿಕ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯ ಶಿಫಾರಸ್ಸುಗಳ ಆಧಾರದಲ್ಲಿ ಕೋಕ್ ಸಲ್ಪರ್ ಘಟಕದ ಮಾಲಿನ್ಯಕ್ಕೆ ತಡೆ ಹೇರಲು ಆರು ಅಂಶಗಳ ಕ್ರಮಗಳನ್ನು ಕೈಗೊಳ್ಳಲು ಕಂಪೆನಿಗೆ ಸೂಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿತು ಎಂದರು.
ಶಬ್ದ, ವಾಯು ಮಾಲಿನ್ಯ, ಕೋಲ್, ಸಲ್ಪರ್ ಹಾರುಬೂದಿಯ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದ ಈ ಆರು ಅಂಶಗಳಲ್ಲಿ ಐದು ಅಂಶಗಳನ್ನು ಕಂಪೆನಿಯು ಭಾಗಶಃ ಜಾರಿಗೊಳಿಸಿದೆ. ಆದರೂ ಶಬ್ದ, ವಾಯು ಮಾಲಿನ್ಯದ ಪ್ರಮಾಣ ಕಡಿಮೆ ಆಗಿಲ್ಲ. ಆರು ಅಂಶಗಳ ಆದೇಶದಲ್ಲಿ ಕಂಪೆನಿ ಹಾಗು ಗ್ರಾಮಗಳ ಜನವಸತಿ ನಡುವಿನ ಹೆಚ್ಚು ಭಾದಿತ ಪ್ರದೇಶದಲ್ಲಿ 27 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ಹಸಿರು ವಲಯ ನಿರ್ಮಿಸಿ, ಜಮೀನು, ವಸತಿ ಕಳೆದುಕೊಳ್ಳುವವರಿಗೆ ಕೈಗಾರಿಕಾ ಭೂಸ್ವಾಧೀನದ ನಿಯಮದಂತೆ ಸೂಕ್ತ ಪುನರ್ವಸತಿ ಕಲ್ಪಿಸಬೇಕಿತ್ತು. ಆದರೆ ಸರಕಾರದ ಈ ಮಹತ್ವದ ಆದೇಶ ಜಾರಿಗೆ ಕಂಪೆನಿಯು ಆಸಕ್ತಿ ವಹಿಸದ ಕಾರಣ ಹತ್ತು ವರ್ಷಗಳ ಕಾಲ ಭೂಸ್ವಾಧೀನ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಹೋರಾಟ ಸಮಿತಿಯ ಸತತ ಪ್ರಯತ್ನದಿಂದಾಗಿ ಸ್ವಾಧೀನ ಪಡೆಸಬೇಕಾದ 27 ಎಕರೆ ಜಮೀನು ಗುರುತಿಸುವ ಕಾರ್ಯವು 5 ವರ್ಷಗಳ ಹಿಂದೆಯೇ ಅಂತಿಮಗೊಂಡಿತ್ತು ಎಂದು ತಿಳಿಸಿದರು.
ಸಂತ್ರಸ್ತರಾದ ಮುಹಮ್ಮದ್ ಜಾಬೀರ್, ಶರೀಫ್ ನಿರ್ಮುಂಜೆ, ಇಕ್ಬಾಲ್ ಜೋಕಟ್ಟೆ, ಸಿಲ್ವಿಯಾ ಪೆರೀಸ್, ಕವಿತಾ ಸುವರ್ಣ, ಹಸೈನಾರ್ ಜೋಕಟ್ಟೆ, ಪುಷ್ಪಾ ಜೋಕಟ್ಟೆ, ಸುಂದರಿ ಜೋಕಟ್ಟೆ, ಮರಿಯಂ ಮತ್ತಿತರರು ಉಪಸ್ಥಿತರಿದ್ದರು.